ವಿಜಯಪುರ : ಪುರುಷರ ಹಕ್ಕುಗಳ ರಕ್ಷಣೆ, ಅನ್ಯಾಯ ಹಾಗೂ ದೌರ್ಜನ್ಯ ತಡೆಗೆ ಪ್ರತ್ಯೇಕ ಆಯೋಗ ಅಗತ್ಯ .ರಾಜ್ಯದಲ್ಲಿ ಮಹಿಳೆಯರ ಹಕ್ಕುಗಳು, ಸುರಕ್ಷತೆ ಮತ್ತು ಸಮಾನತೆಗೆ ಸರ್ಕಾರ ನೀಡುತ್ತಿರುವ ಮಹತ್ವದಷ್ಟೇ ಪುರುಷರ ಹಕ್ಕುಗಳು, ಸುರಕ್ಷತೆ, ಮಾನಸಿಕ ಆರೋಗ್ಯ ಹಾಗೂ ನ್ಯಾಯಕ್ಕೂ ಸಮಾನ ಆದ್ಯತೆ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಪುರುಷರ ಹಕ್ಕುಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಪ್ರತ್ಯೇಕವಾಗಿ ಪುರುಷ ಆಯೋಗವನ್ನು (Men’s Commission) ರಚಿಸಬೇಕು ಎಂದು ಕರ್ನಾಟಕ ರಾಜ್ಯ ಪುರುಷರ ಕಲ್ಯಾಣ ಮತ್ತು ರಕ್ಷಣಾ ಸಮಿತಿಯ ಬೆಂಗಳೂರು ರಾಜ್ಯ ಕಾರ್ಯದರ್ಶಿ ಡಾ. ಅರ್ಜುನ ಬಂಡಿ ಅವರು ಆಗ್ರಹಿಸಿದ್ದಾರೆ.
ಸಮಾಜದಲ್ಲಿ ಪುರುಷರು ಕೂಡ ಅನೇಕ ರೀತಿಯ ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಕಿರುಕುಳ, ಸುಳ್ಳು ಆರೋಪಗಳು, ಆರ್ಥಿಕ ಶೋಷಣೆ, ಸಾಮಾಜಿಕ ಒತ್ತಡ ಹಾಗೂ ಕಾನೂನು ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಮತ್ತು ನ್ಯಾಯ ಪಡೆಯಲು ಸೂಕ್ತ ವೇದಿಕೆ ಇಲ್ಲದೆ ಅನೇಕ ಪುರುಷರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರ ರಕ್ಷಣೆಗಾಗಿ ಮಹಿಳಾ ಆಯೋಗ ಕಾರ್ಯನಿರ್ವಹಿಸುತ್ತಿರುವಂತೆ, ಪುರುಷರ ಸಮಸ್ಯೆಗಳನ್ನು ಆಲಿಸಿ, ಅವರ ಹಕ್ಕುಗಳನ್ನು ರಕ್ಷಿಸಿ, ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಪುರುಷ ಆಯೋಗ ಸ್ಥಾಪಿಸುವುದು ಇಂದಿನ ಕಾಲದ ಅಗತ್ಯವಾಗಿದೆ.
ಪುರುಷರ ಮಾನಸಿಕ ಆರೋಗ್ಯದ ಕಡೆಗೂ ಸರ್ಕಾರ ವಿಶೇಷ ಗಮನಹರಿಸಬೇಕು. ಕೌಟುಂಬಿಕ ಕಲಹ, ವೈವಾಹಿಕ ಸಮಸ್ಯೆಗಳು, ವಿಚ್ಛೇದನ ಪ್ರಕರಣಗಳು, ಮಕ್ಕಳ ಪಾಲನೆ ಮತ್ತು ಪೋಷಣೆಯ ಹಕ್ಕುಗಳು, ವೃದ್ಧಾಪ್ಯದಲ್ಲಿ ಎದುರಾಗುವ ನಿರ್ಲಕ್ಷ್ಯ ಹಾಗೂ ಮಾನಸಿಕ ಕಿರುಕುಳದಂತಹ ಸಮಸ್ಯೆಗಳಿಗೆ ಸೂಕ್ತ ಕಾನೂನು ಸಲಹೆ ಮತ್ತು ಮಾನಸಿಕ ಸಮಾಲೋಚನೆ ಒದಗಿಸುವ ವ್ಯವಸ್ಥೆ ಕಲ್ಪಿಸಬೇಕು.
ಪುರುಷ ಆಯೋಗ ರಚನೆಯಾದಲ್ಲಿ ಪುರುಷರ ಮೇಲಿನ ಅನ್ಯಾಯ, ದೌರ್ಜನ್ಯ ಮತ್ತು ಶೋಷಣೆಯ ದೂರುಗಳನ್ನು ಪರಿಶೀಲಿಸಲು, ಸಂತ್ರಸ್ತರಿಗೆ ಕಾನೂನು ನೆರವು ಒದಗಿಸಲು, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಅನುಕೂಲವಾಗಲಿದೆ.
ಇದು ಪುರುಷರ ವಿರುದ್ಧ ಮಹಿಳೆಯರ ಹೋರಾಟವಲ್ಲ; ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ನಡೆಯುವ ಹೋರಾಟವಾಗಿದೆ. ಸಮಾನತೆ ಎಂದರೆ ಎಲ್ಲರಿಗೂ ಸಮಾನ ನ್ಯಾಯ ದೊರೆಯುವುದೇ ಆಗಿದೆ.
ವರದಿ: ರಾಜು ಮುಂಡೆ


