ಬೆಳಗಾವಿ: ವಿವಾದಾತ್ಮಕ 'ಬಸವ ಮಂಟಪ' ಪುಸ್ತಕಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿರುವ ಆಕ್ರೋಶದ ನಡುವೆಯೇ, ಲೇಖಕ ರವಿ ಹಂಜ್ ಅವರನ್ನು ಕೊಲೆ ಮಾಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಲಿಂಗಾಯತ ಮುಖಂಡರೊಬ್ಬರು ಬಹಿರಂಗವಾಗಿ ಘೋಷಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಪ್ರತಿಭಟನೆ ವೇಳೆ ಈ ವಿವಾದಾತ್ಮಕ ಹೇಳಿಕೆ ಹೊರಬಿದ್ದಿದೆ.
'ಬಸವ ಮಂಟಪ' ಕೃತಿಯಲ್ಲಿ ವಿಶ್ವಗುರು ಬಸವಣ್ಣ ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದು, ಆಕ್ರೋಶ ವ್ಯಕ್ತವಾಗಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲೇಖಕ ರವಿ ಹಂಜ್ ಅವರನ್ನು ಬಂಧಿಸಿದ್ದಾರೆ.
ಅಥಣಿ ಪ್ರತಿಭಟನೆಯಲ್ಲಿ ವಿವಾದಾತ್ಮಕ ಘೋಷಣೆ
ಇದರ ಬೆನ್ನಲ್ಲೇ ಅಥಣಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಲಿಂಗಾಯತ ಮುಖಂಡ ಪ್ರಕಾಶ್ ಮಹಾಜನ್ ಎಂಬುವವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರವಿ ಹಂಜ್ ಅವರನ್ನು ಹತ್ಯೆ ಮಾಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಅವರು ಬಹಿರಂಗವಾಗಿಯೇ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.


