ಕೊಪ್ಪಳ: ಕನಕಗಿರಿ ತಾಲೂಕಿನ ವಡಕಿ ಗ್ರಾಮದ ಆರಾಧ್ಯದೇವಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಹಿಂಭಾಗದ ಜಮೀನಿನೊಂದರಲ್ಲಿ ಶುಕ್ರವಾರ ವಿಜಯನಗರ ಕಾಲದ ಅಪ್ರಕಟಿತ ವೀರಗಲ್ಲೊಂದು ಪತ್ತೆಯಾಗಿದೆ.
ಕಲ್ಲಿನ ಉಬ್ಬು ಶಿಲೆಯಲ್ಲಿ ವೀರನು ಹಾಗೂ ಆತನ ಇಬ್ಬರ ಪರಿಚಾರಕರನ್ನು ಹೊಂದಿರುವ ವೀರಗಲ್ಲು ಕಂಡುಬಂದಿದ್ದು, ಇದನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೆತ್ತನೆ ಮಾಡಲಾಗಿದೆ.ವೀರನ ಬಲಗೈಯಲ್ಲಿ ಕತ್ತಿ ಹಾಗೂ ಎಡಗೈಯಲ್ಲಿ ಬಾಕುವಿನ ಚಿತ್ರಣವಿದೆ.
ವೀರನ ಅಕ್ಕಪಕ್ಕದಲ್ಲಿನ ಇಬ್ಬರು ಪರಿಚಾರಕರ ಕೈಯಲ್ಲಿ ಛತ್ರಿ, ಚಾಮರ ಹಿಡಿದುಕೊಂಡಿದ್ದಾರೆ. ವೀರನ ಸಾಹಸಕ್ಕೆ ತಕ್ಕಂತೆ ತಲೆಯಲ್ಲಿ ಮುಡಿಗಳು, ಕೈಗಡಗ, ತೋಳ್ಬಂದಿ, ಕಾಲ್ಗಡಗ, ಕೊರಳಲ್ಲಿ ಹಾರ ಹಾಗೂ ಕಿವಿಯ ಒಲೆಗಳಂತಹ ಆಭರಣಗಳ ಜತೆಗೆ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರ ಚಿತ್ರಗಳಿವೆ. ರಾಜಮರ್ಯಾದೆ, ಉನ್ನತ ಅಧಿಕಾರ, ದೈವಿಕ ಗೌರವ ಹಾಗೂ ವೀರ ಹುತಾತ್ಮನ ಸವಿ ನೆನಪಿಗಾಗಿ ಈ ವೀರಗಲ್ಲನ್ನು ಕೆತ್ತಲಾಗಿದೆ.


