ಬೆಳಗಾವಿ: ಇಲ್ಲಿನ ಹಿಂಡಾಲ್ಕೊ ಕಂಪನಿ ಕಾರ್ಮಿಕ ಶಂಕರ ತಳವಾರ (24) ಅವರು ಬುಧವಾರ ಕಂಪನಿಯ ಆವರಣದಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದಾಗಿ ಮೃತನ ಕುಟುಂಬದವರು, ಗ್ರಾಮಸ್ಥರು ದಾಂಧಲೆ ನಡೆಸಿದ್ದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮುತ್ಯಾನಟ್ಟಿ ನಿವಾಸಿ ಶಂಕರ ಕಳೆದ ಆರು ವರ್ಷಗಳಿಂದ ಹಿಂಡಾಲ್ಕೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯಲ್ಲಿನ ಕಿರುಕುಳ ಹಾಗೂ ಉದ್ಯೋಗ ಸಂಬಂಧಿತ ಸಮಸ್ಯೆಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಕುಟುಂಬದವರು ಹಾಗೂ ಗ್ರಾಮಸ್ಥರು ಕಂಪನಿಯ ಕಚೇರಿಗೆ ನುಗ್ಗಿದರು.
ಕಲ್ಲೂ ತೂರಾಟ ನಡೆಸಿ, ಕಿಟಕಿಗಳನ್ನು ಒಡೆದರು. ಕಚೇರಿಯಲ್ಲಿ ಪೀಠೋಪಕರಣ ಹಾಗೂ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಧ್ವಂಸ ಮಾಡಿದರು. ಮಾಹಿತಿ ತಿಳಿದ ತಕ್ಷಣ ಭಾರಿ ಪ್ರಮಾಣದ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳು ಹಾಗೂ ನೂರಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಸಾವಿಗೂ ಮುನ್ನ ಶಂಕರ ವಾಟ್ಸ್‌ಆಯಪ್ ಮೂಲಕ ಮರಣಪತ್ರ (ಡೆತ್‌ನೋಟ್) ಬರೆದಿದ್ದು, 'ಕಂಪನಿಯಲ್ಲಿ ಸ್ಥಳೀಯ ಯುವಕರಿಗೆ ಅನ್ಯಾಯವಾಗುತ್ತಿದೆ.
ಎಸ್‌ಎಸ್‌ಎಲ್‌ಸಿ ಅಥವಾ ಐಟಿಐ ವಿದ್ಯಾರ್ಹತೆ ಹೊಂದಿದವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈಗಾಗಲೇ ಇದ್ದವರನ್ನು ಕಾಯಂ ಮಾಡಲು ಹೆಚ್ಚುವರಿ ವಿದ್ಯಾರ್ಹತೆ ಕೇಳಲಾಗುತ್ತಿದೆ. ಕಾಯಮಾತಿ ಮಾಡಿಸುವ ಭರವಸೆ ನೀಡಿ ಕೆಲವರು ಹಣ ಕೂಡ ಪಡೆದಿದ್ದಾರೆ, ಮರಳಿ ಕೊಡುತ್ತಿಲ್ಲ' ಎಂದು ದೂರಿದ್ದಾರೆ.
ಡೆತ್‌ನೋಟ್‌ನಲ್ಲಿ ತಾಯಿ- ತಂದೆಯ ಕ್ಷಮೆ ಯಾಚಿಸಿರುವ ಶಂಕರ, ತನ್ನ ಸಾವಿಗೆ ಕಾರಣವಾದ ಸಮಸ್ಯೆಗಳ ಬಗ್ಗೆ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಶಾಸಕ ಆಸಿಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಕೂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದರು.ಮೃತನ ತಾಯಿ ಹಾಗೂ ಸಂಬಂಧಿಕರ ಆಕ್ರಂದಣ ಮುಗಿಲು ಮುಟ್ಟಿತ್ತು.


