ಮುಂಬೈ: ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿ ಕುರಿತು ಸಾಲು ಸಾಲು ಪ್ರತಿಭಟನೆಗಳು ಹಾಗೂ ಹೊಸ ಚರ್ಚೆಗಳು ಆರಂಭವಾಗಿರುವ ಬೆನ್ನಲ್ಲೇ, ಆರ್‌ಎಸ್‌ಎಸ್ (RSS) ಸರಸಂಘಚಾಲಕ ಮೋಹನ್ ಭಾಗವತ್ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ.
"ಸಾಮಾಜಿಕ ಸಮಾನತೆಯನ್ನು ತರುವುದಕ್ಕಾಗಿ ಮೀಸಲಾತಿಯನ್ನು ನೀಡಲಾಗಿದ್ದು, ಸಮಾಜದಲ್ಲಿ ಅಸಮಾನತೆ ಮತ್ತು ತಾರತಮ್ಯ ಇರುವವರೆಗೂ ಮೀಸಲಾತಿ ವ್ಯವಸ್ಥೆ ಮುಂದುವರಿಯಲಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಂಬೈನ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ (NMACC) IIMUN ಸಂಸ್ಥಾಪಕ ರಿಷಭ್ ಶಾ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಭಾಗವತ್ ಈ ವಿಷಯ ತಿಳಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ 2,000ಕ್ಕೂ ಹೆಚ್ಚು ಯುವಜನರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಅಂಬೇಡ್ಕರ್ ದೃಷ್ಟಿಕೋನದಲ್ಲಿ ಮೀಸಲಾತಿಯನ್ನು ನೋಡಿ:
ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕೈಬಿಡುವ ಸಮಯ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, "ನಾನು ಇದಕ್ಕೆ ನೇರ 'ಹೌದು' ಅಥವಾ 'ಇಲ್ಲ' ಎಂದು ಉತ್ತರಿಸುವುದಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿ ಕುರಿತು ಏನು ಯೋಚಿಸಿದ್ದರು ಎಂಬುದನ್ನು ನಾವೆಲ್ಲರೂ ಗ್ರಹಿಸಬೇಕು. ಅವರ ಆಶಯವನ್ನು ಪ್ರಾಮಾಣಿಕವಾಗಿ ಪಾಲಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ" ಎಂದರು.
"ಸಾಮಾಜಿಕ ಕಾರಣಗಳಿಗಾಗಿ ಮೀಸಲಾತಿ ಜಾರಿಯಲ್ಲಿದೆ. ಸಮಾಜದಲ್ಲಿ ಜಾತಿ ಆಧಾರಿತ ತಾರತಮ್ಯ ಇರುವವರೆಗೆ ಮೀಸಲಾತಿ ಸೌಲಭ್ಯ ಮುಂದುವರಿಯುವುದು ಅನಿವಾರ್ಯ. ಆದರೆ, ಈಗಾಗಲೇ ಮೀಸಲಾತಿಯ ಪ್ರಯೋಜನ ಪಡೆದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುನ್ನಡೆದಿರುವವರು, ತಮ್ಮ ಸಮುದಾಯದ ಇತರ ಬಡವರಿಗೆ ಅನುಕೂಲವಾಗುವಂತೆ ಆ ಸೌಲಭ್ಯವನ್ನು ಸ್ವಯಂಪ್ರೇರಿತವಾಗಿ ತ್ಯಾಗ ಮಾಡುವ ಉದಾರತೆ ತೋರಿಸಬೇಕು" ಎಂದು ಕರೆ ನೀಡಿದರು.


