ಕೋಲಾರ : ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ ವಿದ್ಯಾಶ್ರೀ ಮತ್ತು ಎಸ್.ಬಿ. ಕಾನ್ಸ್ಟೇಬಲ್ ಪ್ರವೀಣ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರು ಅಮಾನತುಗೊಳಿಸಿದ್ದಾರೆ.
ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದು, ಮುಖ್ಯವಾಗಿ ಅಕ್ರಮ ಮರಳು ದಂಧೆ ಮಾಫಿಯಾಗೆ ಪರೋಕ್ಷವಾಗಿ ಸಹಕಾರ ನೀಡಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ನಂಗಲಿ ಬಳಿಯ ಜಂಗಾಲಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಫಿಲ್ಟರ್ ಮರಳು ತೆಗೆಯಲಾಗುತ್ತಿತ್ತು.
ಈ ಬಗ್ಗೆ ಸ್ಥಳೀಯರು ದೂರು ನೀಡಿದರೂ, ನಂಗಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಮುಳಬಾಗಿಲು ಎಎಸ್ಪಿ ಕುಮಾರಿ ಮನೀಷಾ ನೇತೃತ್ವದ ತಂಡ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿತು.
ದಾಳಿ ವೇಳೆ ದೊರೆತ ಸಾಕ್ಷ್ಯಗಳು ಮತ್ತು ಕಾನ್ಸ್ಟೇಬಲ್ ಪ್ರವೀಣ್ ಅವರ ಮೊಬೈಲ್ ಕರೆಗಳ ಪರಿಶೀಲನೆಯಿಂದ ಮರಳು ಮಾಫಿಯಾ ಜೊತೆ ಪೊಲೀಸರ ನಂಟು ಬೆಳಕಿಗೆ ಬಂದಿದೆ.
ಈ ಘಟನೆ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಲಾಖಾ ವೈಫಲ್ಯವನ್ನು ಎತ್ತಿ ತೋರಿಸಿದ್ದು, ಗಡಿಭಾಗದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆಯ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸದ್ಯಕ್ಕೆ, ಅಮಾನತುಗೊಂಡಿರುವವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇದೆ.


