ವಿಶಾಖಪಟ್ಟಣಂ: ನಿಗದಿತ ಮೂರರಿಂದ ನಾಲ್ಕು ವಿಷಲ್ ಹಾಕಿದರೂ ಅನ್ನ ಮತ್ತು ಬೇಳೆಯನ್ನು ಸರಿಯಾಗಿ ಬೇಯಿಸದ ದೋಷಪೂರಿತ ಪ್ರೆಶರ್ ಕುಕ್ಕರ್ ಮಾರಾಟ ಮಾಡಿ, ಗ್ರಾಹಕರಿಗೆ ಸಮರ್ಪಕ ಸೇವೆ ನೀಡದ ಮಳಿಗೆ, ಡೀಲರ್ ಹಾಗೂ ಸಂಬಂಧಪಟ್ಟ ಕಂಪನಿಗೆ ವಿಶಾಖಪಟ್ಟಣಂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದೆ.
ತೊಂದರೆಗೊಳಗಾದ ವೃದ್ಧ ಮಹಿಳೆಗೆ ಒಟ್ಟು 16,755 ರೂಪಾಯಿ ಪರಿಹಾರ ನೀಡುವಂತೆ ಆಯೋಗ ನಿರ್ದೇಶಿಸಿದೆ.
ಪ್ರೆಶರ್ ಕುಕ್ಕರ್ ಎಂಬುದು ಪ್ರತಿಯೊಬ್ಬರ ನಿತ್ಯಜೀವನದ ಅತ್ಯಗತ್ಯ ವಸ್ತುವಾಗಿದೆ. ಅದನ್ನು ಬಳಸುವಲ್ಲಿ ಗ್ರಾಹಕಿ ಎದುರಿಸಿದ ಅಡಚಣೆ ಮತ್ತು ಮಾನಸಿಕ ಕಿರುಕುಳಕ್ಕೆ ಸೂಕ್ತ ಪರಿಹಾರ ಪಡೆಯಲು ಅವರು ಅರ್ಹರಾಗಿದ್ದಾರೆ ಎಂದು ಆಯೋಗದ ಅಧ್ಯಕ್ಷೆ ಗುಡ್ಲಾ ತನುಜಾ ಹಾಗೂ ಸದಸ್ಯರಾದ ವರ್ರಿ ಕೃಷ್ಣಮೂರ್ತಿ ಮತ್ತು ರಹೀಮುನ್ನಿಸಾ ಬೇಗಂ ಅವರಿದ್ದ ಪೀಠವು ಅಕ್ಟೋಬರ್ 31ರಂದು ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಿದೆ.


