ಶ್ರೀ ನಗರ: ಜಮ್ಮು-ಕಾಶ್ಮೀರದ (Jammu Kashmir) ಕಿಶ್ತ್ವಾರ್ (Kishtwar) ಜಿಲ್ಲೆಯ ದುರ್ಗಮ ದಚನ್-ಮರ್ವಾ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (SPO) ಮೃತದೇಹಗಳು ಪತ್ತೆಯಾಗಿವೆ. ಧೇರ್ನಾ ಪೋಸ್ಟ್ ಸಮೀಪದ ಧೇರ್ನಾ ಟಾಪ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ತಂಡ ಶವಗಳನ್ನು ಪತ್ತೆಹಚ್ಚಿದೆ.
ಮೃತರನ್ನು ರಶ್ಪಾಲ್ ಕುಮಾರ್ (40) ಮತ್ತು ಬಾಬಿ ಚಂದ್ (54) ಎಂದು ಗುರುತಿಸಲಾಗಿದೆ. ಹಲವು ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರೂ ಸೇನಾ ಸಿಬ್ಬಂದಿಯೊಂದಿಗೆ ಗಸ್ತು ಕರ್ತವ್ಯದಲ್ಲಿದ್ದರು. ಧೇರ್ನಾ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಸಹೋದ್ಯೋಗಿಗಳ ಬದಲಿಗೆ ಕರ್ತವ್ಯ ವಹಿಸಿಕೊಳ್ಳಲು ತೆರಳುತ್ತಿದ್ದಾಗ ನಾಪತ್ತೆಯಾಗಿದ್ದರು. ಈ ವೇಳೆ ಉಗ್ರರು ಹೊಂಚು ಹಾಕಿ ಗುಂಡಿನ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಮೃತದೇಹಗಳ ಪರಿಶೀಲನೆ ವೇಳೆ ಒಬ್ಬರ ತಲೆಗೆ ಹಾಗೂ ಮತ್ತೊಬ್ಬರ ಬೆನ್ನಿಗೆ ಗುಂಡೇಟು ತಗುಲಿರುವುದು ಕಂಡುಬಂದಿದೆ.
ಇಬ್ಬರೂ ಕೊಂಡೊಯ್ಯುತ್ತಿದ್ದ INSAS ಮತ್ತು .303 ರೈಫಲ್ಗಳು ನಾಪತ್ತೆಯಾಗಿವೆ. ಹತ್ಯೆಯ ಬಳಿಕ ಉಗ್ರರು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ದಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.


