ಬೆಂಗಳೂರು : ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಪತ್ನಿಯೇ ಕೊಲೆಗೈದಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಕೆಂಪೇಗೌಡ ನಗರದ ಲಕ್ಷೀಪುರದಲ್ಲಿ ನಡೆದಿದೆ. ರಾಜಶೇಖರ್(44) ಕೊಲೆಯಾದ ವ್ಯಕ್ತಿಯಾಗಿದ್ದು, ಮಾಲಾಶ್ರೀ ಆರೋಪಿಯಾಗಿದ್ದಾರೆ.
ಬ್ಯಾಂಕ್ನಲ್ಲಿ ಲೋನ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ರಾಜಶೇಖರ್ ಪ್ರತಿದಿನ ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದ. ಬೆಳಗ್ಗೆ ಹೊತ್ತು ಮಾತ್ರ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ರಾತ್ರಿಯಾದ್ರೆ ಸಾಕು ಕುಡಿದು ಕ್ಯಾತೆ ತೆಗೆಯುತ್ತಿದ್ದ. ಮಕ್ಕಳಾಗಿಲ್ಲ ಎಂದು ಆಗಾಗ ಇಬ್ಬರ ಮಧ್ಯೆ ಗಲಾಟೆ ಆಗುತ್ತಲೇ ಇತ್ತು. ನಿನ್ನೆಯೂ ಕುಡಿದ ಮತ್ತಿನಲ್ಲಿ ಬಂದು ಗಲಾಟೆ ಮಾಡಿದ್ದ. ನಿನ್ನೆಯೂ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆರೋಪಿ
ಇನ್ನು ಪತಿಯನ್ನೇ ಕೊಂದಿರುವ ಆರೋಪಿ ಮಾಲಾಶ್ರೀ, ಈ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆ ಸಂಬಂಧ ನಿಮ್ಹಾನ್ಸ್ನಲ್ಲಿ ಮೂರು ತಿಂಗಳು ಚಿಕಿತ್ಸೆ ಸಹ ಪಡೆದಿದ್ದಳು. ನಾಲ್ಕು ತಿಂಗಳ ಹಿಂದಷ್ಟೆ ಆಕೆಯನ್ನು ಆಸ್ಪತ್ರೆಯಿಂದ ಮರಳಿ ಮನೆಗೆ ಕರೆತರಲಾಗಿತ್ತು.
ಮಕ್ಕಳಾಗಿಲ್ಲ ಎಂದು ಪತಿ ರಾಜಶೇಖರ್ ಪದೇ ಪದೇ ಗಲಾಟೆ ಮಾಡುತ್ತಿದ್ದ ಹಿನ್ನೆಲೆ ಮಾಲಾಶ್ರೀ ಖಿನ್ನತೆಗೆ ಒಳಗಾಗಿದ್ದಳು. ಐದು ವರ್ಷದ ಹಿಂದೆ ಮಾಲಾಶ್ರೀ ಮತ್ತು ರಾಜಶೇಖರ್ ವಿವಾಹವಾಗಿತ್ತು.
ಸದ್ಯ ಆಕೆ ಎರಡು ತಿಂಗಳ ಗರ್ಭಿಣಿ ಎನ್ನಲಾಗಿದ್ದು, ನಿನ್ನೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಪತಿಗೆ ಚಾಕು ಇರಿದ್ದಾಳೆ. ನಂತರ ಮನೆಗೆ ಕರೆ ಮಾಡಿ ಅತ್ತಿದ್ದಾಳೆ. ಮೊದಲ ಮಹಡಿಯಲ್ಲಿ ರಾಜಶೇಖರ ತಾಯಿ ವಾಸ ಮಾಡ್ತಿದ್ದು, ಘಟನೆ ನಂತರ ಹೋಗಿ ಬಾಗಿಲು ಬಡಿದ್ರೂ ತಾಯಿ ತೆಗೆದಿರ್ಲಿಲ್ಲ. ಅಷ್ಟೊತ್ತಿಗೆ ತೀವ್ರ ರಕ್ತಸ್ರಾವದಿಂದ ರಾಜಶೇಖರ್ ಮೃತಪಟ್ಟಿದ್ದಾರೆ.


