ಅಥಣಿ : ಪಟ್ಟಣದ ಪ್ರಮುಖ ಜಲಮೂಲ ಹಾಗೂ ಆಯಕಟ್ಟಿನ ಸ್ಥಳವಾದ ವಾರ್ಡ್ ಸಂಖ್ಯೆ ೪ ಮತ್ತು ೧೩ ರ ವ್ಯಾಪ್ತಿಯ ಮುಧೋಳ ಬಾವಿ ಹತ್ತಿರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸ್ವಚ್ಛತಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ದತ್ತಾ ವಾಸ್ಟರ್, ಸದಸ್ಯರಾದ ಮಲ್ಲು ಹುದ್ದಾರ್ ಹಾಗೂ ಆರೋಗ್ಯ ನಿರೀಕ್ಷಕರಾದ ರವೀಂದ್ರ ಸನಗೌಂಡ ಅವರ ನೇತೃತ್ವದಲ್ಲಿ ಈ ಅಭಿಯಾನ ನಡೆಯಿತು. ಕಾರ್ಯಕ್ರಮದಲ್ಲಿ ಪುರಸಭೆಯ ಸಮುದಾಯ ಸಂಚಾಲಕರು ಶಿವಲೀಲಾ ಕೊಳಲಗಿ,ರೇಖಾ ಬಳ್ಳೊಳ್ಳಿ, ಶೋಭಾ ಮಠಪತಿ, ಸೇಜಲ ರಜಪೂತ, ದೀಪಿಕಾ ಸಾಗರ ಹಾಗೂ ಪುರಸಭೆ ಪೌರಕಾರ್ಮಿಕರು ಇವರು ಅತಿ ಉತ್ಸಾಹದಿಂದ ಭಾಗವಹಿಸಿ, ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಶ್ರಮಿಸುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆಯ ಜಾಗೃತಿ ಮೂಡಿಸಿದರು. ಮುಧೋಳ ಬಾವಿಯ ಆವರಣದಲ್ಲಿದ್ದ ಕಸದ ತೊಟ್ಟಿಯಿಂದಾಗಿ ಇಡೀ ಪ್ರದೇಶವು ಕಸದ ಮಯವಾಗಿ ಮಾರ್ಪಟ್ಟಿತ್ತು. ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಧಕ್ಕೆಯುಂಟಾಗುವ ಭೀತಿ ಎದುರಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಈ ಅಭಿಯಾನದ ಮೂಲಕ ಅಲ್ಲಿ ಜಮಾವಣೆಗೊಂಡಿದ್ದ ಕಸದ ರಾಶಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಇಡೀ ಪ್ರದೇಶವನ್ನು ಮಾದರಿಯಾಗಿ ಸ್ವಚ್ಛಗೊಳಿಸಲಾಯಿತು.
ಕಸದಿಂದ ಹರಡಬಹುದಾದ ಸಾಂಕ್ರಾಮಿಕ ರೋಗ-ರುಜಿನಗಳನ್ನು ತಡೆಗಟ್ಟುವುದು, ಸ್ಥಳೀಯ ಪರಿಸರವನ್ನು ಸಂರಕ್ಷಿಸುವುದು ಮತ್ತು ಸಾರ್ವಜನಿಕರಿಗೆ ಮುಕ್ತ ಹಾಗೂ ಶುದ್ಧ ವಾತಾವರಣವನ್ನು ನಿರ್ಮಿಸಿಕೊಡುವುದು ಈ ಭಗೀರಥ ಪ್ರಯತ್ನದ ಮುಖ್ಯ ಉದ್ದೇಶವಾಗಿತ್ತು.ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಪೌರಕಾರ್ಮಿಕರಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ದತ್ತಾ ವಾಸ್ಟರ್ ಅವರು ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸಿದರು. ಇದೇ ವೇಳೆ ಮಾತನಾಡಿದ ಪುರಸಭೆ ಸದಸ್ಯ ಮಲ್ಲು ಹುದ್ದಾರ್ ಅವರು, ಪಟ್ಟಣವನ್ನು ಸುಂದರ ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವುದು ಕೇವಲ ಆಡಳಿತ ಮಂಡಳಿಯ ಕೆಲಸವಲ್ಲ, ಅದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ ಎಂದು ನೆನಪಿಸಿದರು. ಆರೋಗ್ಯ ನಿರೀಕ್ಷಕರಾದ ರವೀಂದ್ರ ಸನಗೌಂಡ ಅವರು ಮಾತನಾಡಿ, ಪುರಸಭೆಯು ಪಟ್ಟಣದ ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ; ಆದರೆ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಹಾಕದೆ ಪುರಸಭೆಯೊಂದಿಗೆ ಕೈಜೋಡಿಸಿದರೆ ಮಾತ್ರ ಸಂಪೂರ್ಣ ಸ್ವಚ್ಛ ಅಥಣಿಯನ್ನು ನಿರ್ಮಿಸಲು ಸಾಧ್ಯ ಎಂದು ಮನವಿ ಮಾಡಿಕೊಂಡರು.
ವರದಿ : ಪ್ರಲ್ಹಾದ ವಾಘಮೋರೆ.

