ಇಂಡಿ: ತಾಲೂಕಿನ ಶಿರಗೂರ ಗ್ರಾಮದಲ್ಲಿ ಮೊಹರಂ ಹಬ್ಬದ ಕೊನೆಯ ದಿನ ಪಂಜಿ ಭಗ್ನವಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಉಂಟಾದ ಕಂಟಕ ನಿವಾರಣೆಯಾಗಲಿ ಹಾಗೂ ಸುಖ-ಶಾಂತಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಗ್ರಾಮಸ್ಥರು ಜಾತಿ-ಧರ್ಮ ಭೇದ ಮರೆತು ಸೌಹಾರ್ದದಿಂದ ಒಂದಾಗಿ ಶ್ರೀ ಲಕ್ಷ್ಮೀದೇವಿ ಜಾತ್ರೆ ಮಹೋತ್ಸವವನ್ನು ಅತ್ಯಂತ ಭಕ್ತಿಭಾವ ಮತ್ತು ವಿಜೃಂಭಣೆಯಿಂದ ಆಚರಿಸಿದರು.
100ಕ್ಕೂ ಹೆಚ್ಚು ಮಹಿಳೆಯರು ಭೀಮಾ ನದಿಯಿಂದ ಪವಿತ್ರ ಜಲ ತುಂಬಿದ ಕುಂಭಗಳನ್ನು ತಲೆಯ ಮೇಲೆ ಹೊತ್ತು ಭಕ್ತಿಪೂರ್ವಕ ಮೆರವಣಿಗೆಯಲ್ಲಿ ಸಾಗಿದರು. ಜೈ ಲಕ್ಷ್ಮೀದೇವಿ ಎಂಬ ಜಯಘೋಷಗಳು ಮೊಳಗುತ್ತಿದ್ದಂತೆ ಗ್ರಾಮದಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಗಿತ್ತು. ದೇವಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಗ್ರಾಮಸ್ಥರು ತಮ್ಮ ಹರಕೆಗಳನ್ನು ಭಕ್ತಿಯಿಂದ ತೀರಿಸಿದರು.
ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ಸಮುದಾಯದ ಜನರು ಉತ್ಸಾಹದಿಂದ ಪಾಲ್ಗೊಂಡು ಗ್ರಾಮದ ಸುಖ, ಶಾಂತಿ, ಸಮೃದ್ಧಿ, ಉತ್ತಮ ಮಳೆ, ಬೆಳೆ ಹಾಗೂ ಸರ್ವರ ಒಳಿತಿಗಾಗಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಜಾತಿ-ಧರ್ಮಗಳ ಭೇದವಿಲ್ಲದೆ ಒಂದೇ ಕುಟುಂಬದಂತೆ ಗ್ರಾಮಸ್ಥರು ಒಗ್ಗಟ್ಟಿನಿಂದ ಭಾಗವಹಿಸಿರುವುದು ಶಿರಗೂರದ ಸಾಮರಸ್ಯದ ಪರಂಪರೆಗೆ ಮತ್ತೊಂದು ಸಾಕ್ಷಿಯಾಯಿತು. ಧಾರ್ಮಿಕ ಆಚರಣೆಯೊಂದಿಗೆ ಐಕ್ಯತೆ, ಭ್ರಾತೃತ್ವ ಮತ್ತು ಸೌಹಾರ್ದದ ಸಂದೇಶ ಸಾರಿದ ಈ ಜಾತ್ರೆ ಮಹೋತ್ಸವ ಗ್ರಾಮಸ್ಥರ ಭಕ್ತಿ, ನಂಬಿಕೆ ಹಾಗೂ ಒಗ್ಗಟ್ಟಿನ ಪ್ರತೀಕವಾಗಿ ಗಮನ ಸೆಳೆಯಿತು.
ವರದಿ: ಉಮಾಶಂಕರ ಕ್ಷತ್ರಿ


