ಮುಂಬೈ: ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ಚುರುಕು ಪಡೆದಿದ್ದು, ಮುಂಬೈನಲ್ಲಿ ಭಾನುವಾರ ಒಂದೇ ದಿನ ಮಳೆ ಅನಾಹುತಕ್ಕೆ 7 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಮುಂಬೈನ ಮನ್‌ಖರ್ದ್ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ಮನೆ ಕುಸಿದು 6 ಜನರು ಸಾವನ್ನಪ್ಪಿ, ಒಬ್ಬರು ಗಾಯಗೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮನೆಯ ಮೇಲೆ ಮರಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ನಗರದಲ್ಲಿ ಭಾರೀ ಮಳೆ ಸುರಿದ ಪರಿಣಾಮ ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಸಾಮಾನ್ಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 10 ಗಂಟೆ ಅವಧಿಯಲ್ಲಿ 5ರಿಂದ 7 ಸೆ.ಮೀ. ಮಳೆ ಸುರಿದಿದೆ.
ಕಟ್ಟಡದ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆ ಇದೆ. ಹೀಗಾಗಿ, ಅಗ್ನಿಶಾಮಕ ದಳ ಮತ್ತು ಮುಂಬೈ ಪೊಲೀಸರ ನೇತೃತ್ವದಲ್ಲಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಧಾರಾಕಾರ ಮಳೆ ರಕ್ಷಣಾ ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ.
ಮುಂಬೈನ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ರಸ್ತೆಗಳ ಮೇಲೆ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


