ನವದೆಹಲಿ: ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದುರ್ಘಟನೆ ಜೂನ್ 26ರಂದು ಬೆಳಗ್ಗೆ ಸುಮಾರು 6.40ಕ್ಕೆ ನಡೆದಿದ್ದು, ಅದರ ಸಿಸಿಟಿವಿ ದೃಶ್ಯ ಇದೀಗ ಬಹಿರಂಗವಾಗಿದೆ.
24 ಸೆಕೆಂಡ್‌ಗಳ ಸಿಸಿಟಿವಿ ದೃಶ್ಯದಲ್ಲಿ ಎರಡು ಟ್ಯಾಂಕರ್‌ಗಳು ಟೋಲ್ ಪ್ಲಾಜಾಕ್ಕೆ ಬರುತ್ತಿರುವುದು ಕಾಣುತ್ತದೆ.
ಈ ವೇಳೆ ಅವುಗಳಲ್ಲಿ ಒಂದು ಟ್ಯಾಂಕರ್ ಏಕಾಏಕಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನೇರವಾಗಿ ಟೋಲ್ ಬೂತ್‌ಗೆ ನುಗ್ಗುತ್ತದೆ.ಡಿಕ್ಕಿಯ ನಂತರ ಟ್ಯಾಂಕರ್‌ನಿಂದ ಎಲ್‌ಪಿಜಿ ಅನಿಲ ಸೋರಿಕೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ದಟ್ಟ ಹೊಗೆ ಮತ್ತು ಅಗ್ನಿಜ್ವಾಲೆಗಳು ಇಡೀ ಪ್ರದೇಶವನ್ನು ಆವರಿಸಿವೆ. ಬೆಂಕಿಯ ಜ್ವಾಲೆಗಳು ಸುಮಾರು ಎರಡು ಕಿಲೋಮೀಟರ್ ದೂರದಿಂದಲೂ ಗೋಚರಿಸುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.


