ನವದೆಹಲಿ : ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ರಾಜ್ಯಗಳ ಆರ್ಥಿಕತೆಗೆ ಬಲ ತುಂಬಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯಗಳಿಗೆ ನೀಡಲಾಗುವ ತೆರಿಗೆ ಪಾಲಿನ ರೂಪದಲ್ಲಿ ಒಟ್ಟು ₹1,09,019 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ವಿವಿಧ ರಾಜ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಅಗತ್ಯವಿರುವ ನಿಧಿಯ ಪೂರೈಕೆಯಾಗಲಿದ್ದು, ಹಬ್ಬದ ಸಂಭ್ರಮದ ನಡುವೆ ರಾಜ್ಯಗಳ ಖಜಾನೆಗೆ ದೊಡ್ಡ ಮಟ್ಟದ ನೆರವು ಸಿಕ್ಕಂತಾಗಿದೆ.
ಈ ಒಟ್ಟು ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ₹4,504 ಕೋಟಿ ರೂಪಾಯಿ ಸಿಕ್ಕಿದೆ. ನಿಯಮಿತ ಮಾಸಿಕ ಹಂಚಿಕೆಯ ಹೊರತಾಗಿ, ಪ್ರಸ್ತುತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡುತ್ತಿರುವ 2ನೇ ಹೆಚ್ಚುವರಿ ಕಂತು ಇದಾಗಿದೆ. ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಹಾಗೂ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳನ್ನು ತಡೆಯಿಲ್ಲದೆ ವೇಗವಾಗಿ ಮುನ್ನಡೆಸಲು ಈ ಅನುದಾನವು ಹೆಚ್ಚಿನ ಬಲ ನೀಡಲಿದೆ.
ಕಳೆದ ಆಗಸ್ಟ್ ತಿಂಗಳಿನಲ್ಲೂ ಕೇಂದ್ರ ಸರ್ಕಾರವು ಇದೇ ರೀತಿ ₹1.09 ಲಕ್ಷ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಹಬ್ಬಗಳ ಋತುವಿನಲ್ಲಿ ರಾಜ್ಯಗಳು ಸಾರ್ವಜನಿಕ ವೆಚ್ಚಗಳು, ಕಲ್ಯಾಣ ಯೋಜನೆಗಳು ಮತ್ತು ಬಂಡವಾಳ ಹೂಡಿಕೆ ಕಾಮಗಾರಿಗಳಿಗೆ ಎದುರಿಸಬಹುದಾದ ನಿಧಿ ಕೊರತೆಯನ್ನು ನೀಗಿಸಲು ಈ ಮೊತ್ತವನ್ನು ಮುಂಚಿತವಾಗಿಯೇ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.


