ನವದೆಹಲಿ: ಡಿಜಿಟಲ್ ವಂಚನೆ (Bank Frauds) ಪ್ರಕರಣಗಳಲ್ಲಿ ಗ್ರಾಹಕರು ಹಣ ಕಳೆದುಕೊಂಡರೆ ಅದರ ಹೊಣೆಯನ್ನು ಬ್ಯಾಂಕ್‌ಗಳೂ (Banks) ಹೊರಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಗ್ರಾಹಕರ ಹಣಕ್ಕೆ ಭದ್ರತೆ ಒದಗಿಸುವುದು ಬ್ಯಾಂಕ್‌ಗಳ ಪ್ರಮುಖ ಜವಾಬ್ದಾರಿಯಾಗಿದ್ದು, ಅನುಮಾನಾಸ್ಪದ ಹಣಕಾಸು ವಹಿವಾಟುಗಳನ್ನು ಪತ್ತೆಹಚ್ಚುವಲ್ಲಿ ಬ್ಯಾಂಕ್‌ಗಳು ವಿಫಲವಾದರೆ ಸಂತ್ರಸ್ತರಿಗೆ ಪರಿಹಾರ ನೀಡುವ ವ್ಯವಸ್ಥೆ ರೂಪಿಸಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯಿಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ಡಿಜಿಟಲ್ ವಂಚನೆ ಪ್ರಕರಣಗಳ ವಿಚಾರಣೆ ವೇಳೆ ಬ್ಯಾಂಕ್‌ಗಳ ಕಾರ್ಯವೈಖರಿ ಕುರಿತು ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.
ಅನುಮಾನಾಸ್ಪದ ವಹಿವಾಟು ಪತ್ತೆಹಚ್ಚಲು ಬ್ಯಾಂಕ್‌ಗಳಿಗೆ ಸಾಧ್ಯವಿಲ್ಲವೇ?
ಗ್ರಾಹಕರ ಬ್ಯಾಂಕ್ ಖಾತೆಗಳಲ್ಲಿ ನಡೆಯುವ ಅಸಹಜ ಹಣಕಾಸು ವಹಿವಾಟುಗಳನ್ನು ಗುರುತಿಸುವ ವ್ಯವಸ್ಥೆ ಬ್ಯಾಂಕ್‌ಗಳಲ್ಲಿರಬೇಕು. ಅನುಮಾನಾಸ್ಪದ ವಹಿವಾಟು ಕಂಡುಬಂದ ತಕ್ಷಣ ಅದನ್ನು ತಾತ್ಕಾಲಿಕವಾಗಿ ತಡೆಹಿಡಿದು ಪರಿಶೀಲನೆ ನಡೆಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಾಮಾನ್ಯವಾಗಿ ದಿನಕ್ಕೆ 10 ಸಾವಿರ ಅಥವಾ 20 ಸಾವಿರ ರೂಪಾಯಿ ವಹಿವಾಟು ನಡೆಸುವ ವ್ಯಕ್ತಿಯ ಖಾತೆಯಿಂದ ಏಕಾಏಕಿ 50 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ವರ್ಗಾವಣೆಯಾದರೆ ಬ್ಯಾಂಕ್‌ಗಳಿಗೆ ಅನುಮಾನ ಬರಬೇಕಲ್ಲವೇ? ಇಂತಹ ವಹಿವಾಟುಗಳನ್ನು ಗುರುತಿಸಿ ಗ್ರಾಹಕರನ್ನು ಎಚ್ಚರಿಸುವುದು ಬ್ಯಾಂಕ್‌ಗಳ ಕರ್ತವ್ಯವಲ್ಲವೇ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.


