ಬೆಂಗಳೂರು : ಅಹಿಂದ ನಾಯಕತ್ವದ ಉತ್ತರಾಧಿಕಾರಿ ಪಟ್ಟಾಭಿಷೇಕಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ. ದಾರಿಗಳು ನೂರೊಂದು ಇರಬಹುದು, ಆದರೆ ನಮ್ಮ ಗುರಿ ಒಂದೇ. ಅಹಿಂದ ಬ್ಲಡ್ ಯಾವಾಗಲೂ ಒಂದೇ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಚ್.ಸಿ. ಮಹದೇವಪ್ಪ ಪ್ರತ್ಯೇಕವಾಗಿ ಅಹಿಂದ ಸಮಾವೇಶ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿದರು.
ನಿನ್ನೆ ನಡೆದ ಸಭೆಗೆ ತಮಗೆ ಆಹ್ವಾನ ಇರಲಿಲ್ಲ. ಹೀಗಾಗಿ ಸಭೆಗೆ ಹೋಗಿಲ್ಲ. ಆದರೆ ಏನೇ ಆದರೂ ನಾವೆಲ್ಲರೂ ಒಂದೇ. ಬೆಂಗಳೂರಿಗೆ ಬರಲು ನೂರಾರು ದಾರಿಗಳಿದ್ದರೂ ಎಲ್ಲರೂ ಒಂದೇ ಕಡೆ ಸೇರುವಂತೆ ಅಹಿಂದ ವಿಚಾರದಲ್ಲೂ ನಮ್ಮ ನಿಲುವು ಒಂದೇ ಎಂದರು.
ಅಹಿಂದ ನಾಯಕತ್ವದ ಕುರಿತು, ಯಾರು ನಾಯಕತ್ವ ವಹಿಸಿಕೊಳ್ಳುತ್ತಾರೋ ಅವರೇ ಅಹಿಂದ ನಾಯಕ ಆಗುತ್ತಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ನಾಯಕತ್ವ ವಹಿಸಿದ್ದರು.
ಮುಂದಿನ ವಿಚಾರವನ್ನು ಕಾದು ನೋಡೋಣ. ಆದರೆ ಅಹಿಂದ ಉತ್ತರಾಧಿಕಾರಿ ಪಟ್ಟಾಭಿಷೇಕಕ್ಕೆ ಈಗಲೇ ಸಮಯ ಪಕ್ವವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಅಥವಾ ಮೂರನೇ ಮುಖ್ಯಮಂತ್ರಿ ವಿಚಾರವಾಗಿ ಯಾವುದೇ ಚರ್ಚೆ ನಡೆಯುತ್ತಿಲ್ಲ. ಈಗಿರುವವರೇ ಸರ್ಕಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡು ಇನ್ನೂ ನಾಲ್ಕು ತಿಂಗಳಷ್ಟೇ ಆಗಿದೆ. ಹೀಗಿರುವಾಗ ದಲಿತ ಮುಖ್ಯಮಂತ್ರಿ ವಿಚಾರ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ವಿಚಾರವಾಗಿ, ಪಕ್ಷದ ಹಾಗೂ ಇತರ ವಿಷಯಗಳ ಕುರಿತು ಚರ್ಚೆ ನಡೆಸಬಹುದು. ಇಬ್ಬರು ಪ್ರತ್ಯೇಕವಾಗಿ ಮಾತನಾಡುವಾಗ ಏನು ಚರ್ಚೆಯಾಗುತ್ತದೆ ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ? ಸಿದ್ದರಾಮಯ್ಯ ಅವರು ಮುಕ್ತವಾಗಿ ಮಾತನಾಡುವ ಅವಕಾಶ ಹೊಂದಿದ್ದಾರೆ ಎಂದರು.


