ಮೈಸೂರು: ರಾಜ್ಯ ರಾಜಕಾರಣದಲ್ಲಿ ಹಲ್‌ಚಲ್ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ವಿವಾದದ ನಡುವೆಯೇ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ವಿಶ್ವನಾಥ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ತಮ್ಮ ಬಹುನಿರೀಕ್ಷಿತ 'ಬಾಂಬೆ ಡೇಸ್' (Bombay Days) ಪುಸ್ತಕವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ವಿಶ್ವನಾಥ್, ತಮ್ಮ ಈ ನಿರ್ಧಾರದ ಹಿಂದಿರುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
'ಬಾಂಬೆ ಡೇಸ್ ಪುಸ್ತಕದ ಬರವಣಿಗೆ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಇದನ್ನು ಪ್ರಕಟಿಸದಿರಲು ತೀರ್ಮಾನಿಸಿದ್ದೇನೆ.
ಈ ಪುಸ್ತಕವನ್ನು ಈಗ ಬಿಡುಗಡೆ ಮಾಡಿದರೆ, ಜನರು ಇಂದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಮತ್ತಷ್ಟು ಅಸಹ್ಯಪಟ್ಟುಕೊಳ್ಳುವ ವಾತಾವರಣ ನಿರ್ಮಾಣವಾಗುತ್ತದೆ,' ಎಂದು ಅವರು ತಿಳಿಸಿದರು.
ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಬೇಸರ ವ್ಯಕ್ತಪಡಿಸಿದ ವಿಶ್ವನಾಥ್, 'ಈಗಾಗಲೇ ಸಾರ್ವಜನಿಕರಲ್ಲಿ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ತೀವ್ರ ಅಸಮಾಧಾನ ಹಾಗೂ ಅಸಹ್ಯ ಮೂಡಿದೆ. ಇಂತಹ ಸಮಯದಲ್ಲಿ ಪುಸ್ತಕ ಬಿಡುಗಡೆ ಮಾಡಿ ಆ ಅಸಹ್ಯವನ್ನು ಇನ್ನಷ್ಟು ಹೆಚ್ಚಿಸಲು ನನಗೆ ಇಷ್ಟವಿಲ್ಲ,' ಎಂದು ಮಾರ್ಮಿಕವಾಗಿ ನುಡಿದರು.


