ನವದೆಹಲಿ: ರೈಲು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಬೆಂಕಿ ಅವಘಡಗಳನ್ನು ತಪ್ಪಿಸುವ ದೃಷ್ಟಿಯಿಂದ, ರೈಲುಗಳಲ್ಲಿ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸುವಂತೆ ಭಾರತೀಯ ರೈಲ್ವೆ ಮಂಡಳಿ (Railway Board) ಎಲ್ಲಾ ವಲಯಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಆದೇಶಕ್ಕೆ ಕಾರಣವಾದ ಪವರ್ ಬ್ಯಾಂಕ್ ಸ್ಫೋಟ
ಇತ್ತೀಚೆಗೆ ಮುಂಬೈ ಲೋಕಲ್ ರೈಲಿನ ಕೋಚ್‌ನಲ್ಲಿ ಚಾರ್ಜ್‌ಗೆ ಇಟ್ಟಿದ್ದ ಪವರ್ ಬ್ಯಾಂಕ್ ದಿಢೀರನೆ ಸ್ಫೋಟಗೊಂಡ ಪರಿಣಾಮ ಬೋಗಿಯ ತುಂಬ ದಟ್ಟವಾದ ಹೊಗೆ ಆವರಿಸಿ ಪ್ರಯಾಣಿಕರಲ್ಲಿ ಭಾರಿ ಭೀತಿ ಮೂಡಿಸಿತ್ತು.
ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲವಾದರೂ, ರೈಲ್ವೆ ಇಲಾಖೆ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಯಾವುದೇ ವಿನಾಯಿತಿ ಇಲ್ಲ, ಸಿಬ್ಬಂದಿಗೆ ಎಚ್ಚರಿಕೆ
ಅಕ್ಟೋಬರ್ 26 ರಂದು ರೈಲ್ವೆ ಮಂಡಳಿಯು ಎಲ್ಲಾ ವಲಯ ರೈಲ್ವೆಗಳಿಗೆ ಅಧಿಕೃತ ಸುತ್ತೋಲೆ ರವಾನಿಸಿದ್ದು, ಈ ನಿಯಮ ಪಾಲನೆಯಲ್ಲಿ ಯಾವುದೇ ರೀತಿಯ ವಿನಾಯಿತಿಗೆ ಅವಕಾಶವಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.
ಈ ಹಿಂದೆ ನಿಯಮ ಜಾರಿಯಲ್ಲಿದ್ದರೂ ಹಲವು ಕಡೆ ಸಿಬ್ಬಂದಿ ನಿಗದಿತ ಅವಧಿಯಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ಸ್ವಿಚ್ ಆಫ್ ಮಾಡಲು ವಿಫಲರಾಗುತ್ತಿರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ವಿಶೇಷ ತರಬೇತಿ ಹಾಗೂ ಸೂಚನೆ ನೀಡಲು ಮತ್ತು ನಿಯಮ ಉಲ್ಲಂಘಿಸುವ ಸಿಬ್ಬಂದಿಯನ್ನು ನೇರ ಹೊಣೆಗಾರರನ್ನಾಗಿ ಮಾಡಲು ಸೂಚಿಸಲಾಗಿದೆ.


