ಬೆಂಗಳೂರು : ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯ ಒಮ್ಮತದ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು ಗೆಲುವು ಸಾಧಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಇದು ಸತ್ಯಕ್ಕೆ ಸಂದ ಜಯ ಎಂದು ವರ್ಣಿಸಿದ್ದಾರೆ.
ಸುಳ್ಳು, ದುರಾಡಳಿತ, ಹಣಬಲ ಮತ್ತು ತೋಳ್ಬಲ ಈ ಚುನಾವಣೆಯಲ್ಲಿ ಸೋತಿದ್ದು, ಹೊಸ ಭರವಸೆಯ ಉದಯಕ್ಕೆ ಇದು ನಾಂದಿಯಾಗಿದೆ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಗೆಲುವಿಗೆ ರಂಗನಾಥ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಕುಮಾರಸ್ವಾಮಿ, ಉಳಿದ ಮೂರು ಕ್ಷೇತ್ರಗಳಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಮಿಷ ಮತ್ತು ಅಧಿಕಾರದ ಪ್ರಭಾವಕ್ಕೆ ಮಣಿಯದೆ ಮತ ಚಲಾಯಿಸಿದ ಶಿಕ್ಷಕರಿಗೆ ಹಾಗೂ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರಿಗೆ ಅವರು ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ. ಗುರುವೇ ದಾರಿ ಎಂಬಂತೆ ಶಿಕ್ಷಕರು ಮುಂದಿನ ಬದಲಾವಣೆಗೆ ದಾರಿ ತೋರಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಫಲಿತಾಂಶವನ್ನು ಐತಿಹಾಸಿಕ ಎಂದು ಕರೆದಿರುವ ಕುಮಾರಸ್ವಾಮಿ, ಇದು 2028ರ ವಿಧಾನಸಭಾ ಚುನಾವಣೆಗೆ ಸ್ಪಷ್ಟ ಜನಾದೇಶವಾಗಿದೆ ಎಂದು ಹೇಳಿದ್ದಾರೆ.
ಒಗ್ಗಟ್ಟು ಮತ್ತು ಮೈತ್ರಿಯಲ್ಲಿ ಶಕ್ತಿ ಇದೆ ಎಂಬುದನ್ನು ಈ ಚುನಾವಣೆ ಸಾಬೀತುಪಡಿಸಿದೆ ಎಂದಿರುವ ಅವರು, ಈ ದೀಪಾವಳಿಯಿಂದಲೇ ನರಕಾಸುರನ ಪತನ ಆರಂಭವಾಗಿದೆ ಮತ್ತು ಮುಂದಿನ ದೀಪಾವಳಿಯ ವೇಳೆಗೆ ರಾಜ್ಯದಲ್ಲಿ ಮೈತ್ರಿಯ ಬೆಳಕು ಮೂಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮೈತ್ರಿಯ ಪ್ರೇರಕ ಶಕ್ತಿಗಳಾದ ಪ್ರಧಾನಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.


