ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೃಷ್ಣ, ದೂದಗಂಗಾ, ವೇದಗಂಗಾ ನದಿಗಳು ತುಂಬಿ ಹರಿಯುತ್ತಿವೆ.
ಇದರಿಂದಾಗಿ ಬೆಳಗಾವಿಯ ನಿಪ್ಪಾಣಿ ತಾಲೂಕಿನಲ್ಲಿ ಮೂರು ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ.
ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಮುಳುಗಿದೆ.
ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಬಾರವಾಡ-ಕನ್ನೂರ, ಬೋಜವಾಡಿ-ಗಜವರವಾಡಿ ಸೇತುವೆಗಳೂ ಸಂಪೂರ್ಣ ಜಲಾವೃತವಾಗಿವೆ.
ಮಹಾರಾಷ್ಟ್ರದಲ್ಲಿರುವ ರಾಜಾಪುರ-ಜುಗಳ ಸೇತುವೆ ಮೇಲೆಯೂ ನೀರು ಹರಿಯುತ್ತಿದ್ದು, ಉಕ್ಕಿ ಹರಿಯುತ್ತಿರುವ ನದಿಗಳಿಗೆ ಯಾರೂ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಪಶ್ಚಿಮ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಿದೆ.
ವಿಶೇಷವಾಗಿ ಬೇಸಿಗೆಯಲ್ಲಿ ಸಂಪೂರ್ಣ ಬತ್ತಿಹೋಗಿದ್ದ ವೇದಗಂಗಾ ನದಿ ಈಗ ಒಡಲು ತುಂಬಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳ ಜನರಲ್ಲಿ ಸಂತಸ ಮೂಡಿಸಿದೆ.
ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಸಾತಾರಾ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಕೃಷ್ಣಾ ಮತ್ತು ದೂಧಗಂಗಾ ನದಿಗಳಲ್ಲಿ ಸುಮಾರು ಐದು ಅಡಿಯಷ್ಟು ನೀರಿನ ಮಟ್ಟ ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ನೀರಿನ ಕೊರತೆಯಿಂದ ಬಳಲುತ್ತಿದ್ದ ನದಿಗಳು ಮತ್ತೆ ಜೀವಕಳೆ ಪಡೆದುಕೊಂಡಿವೆ.
ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿರುವ ವೇದಗಂಗಾ ನದಿಯೂ ಉತ್ತಮ ಪ್ರಮಾಣದ ನೀರನ್ನು ಹೊತ್ತು ಹರಿಯುತ್ತಿದೆ.
ಕೆಲವೇ ದಿನಗಳ ಹಿಂದೆ ನೀರಿಲ್ಲದೆ ಬತ್ತಿದ್ದ ನದಿಪಾತ್ರ ಇದೀಗ ತುಂಬಿ ಹರಿಯುತ್ತಿರುವ ದೃಶ್ಯ ಸ್ಥಳೀಯರಲ್ಲಿ ಆಶಾಭಾವನೆ ಮೂಡಿಸಿದೆ.
ಕೃಷಿಕರು ಹಾಗೂ ನದಿ ತೀರದ ನಿವಾಸಿಗಳು ಇದನ್ನು ಉತ್ತಮ ಮುಂಗಾರು ಆರಂಭದ ಸಂಕೇತವಾಗಿ ಸ್ವಾಗತಿಸಿದ್ದಾರೆ.
ನದಿಗಳಲ್ಲಿ ಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಯೋಜನೆಗಳು, ಬ್ಯಾರೇಜ್‌ಗಳು ಹಾಗೂ ಜಲಾಶಯಗಳಿಗೆ ಒಳಹರಿವು ಹೆಚ್ಚುವ ನಿರೀಕ್ಷೆಯಿದೆ.
ಇದರಿಂದ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿಯೂ ನೀರಿನ ಲಭ್ಯತೆ ಸುಧಾರಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.


