ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ.
ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಹೊರವಲಯದಲ್ಲಿರುವ ಪ್ರಸಿದ್ಧ 'ಡೆಲ್ಟಾ ಜಲಪಾತ'ಕ್ಕೆ (Delta Falls) ಈಗ ಹೊಸ ಕಳೆ ಬಂದಿದೆ.
ದಟ್ಟ ಅರಣ್ಯದ ಮಧ್ಯೆ ಹಾಲಿನ ನೊರೆಯಂತೆ ಧುಮುಕುತ್ತಿರುವ ಜಲಪಾತವನ್ನು ಕಣ್ಣುಂಬಿಕೊಳ್ಳಲು ಜನ ಕಾತರರಾಗಿದ್ದಾರೆ. ಆದರೆ, ಇದೇ ಹೊತ್ತಿನಲ್ಲಿ ಪ್ರವಾಸಿಗರಿಗೆ ಅರಣ್ಯ ಇಲಾಖೆ ಸಣ್ಣ ಶಾಕ್ ನೀಡಿದ್ದು, ಜಲಪಾತದ ವೀಕ್ಷಣೆಗೆ ಸಂಪೂರ್ಣ ನಿಷೇಧ ಹೇರಿದೆ.
ಜಲಪಾತಕ್ಕೆ ಜೀವಕಳೆ ಬರುತ್ತಿದ್ದಂತೆ ಪ್ರವಾಸಿಗರ ದಂಡು ಇಲ್ಲಿಗೆ ಲಗ್ಗೆ ಇಡಲಾರಂಭಿಸಿತ್ತು. ಆದರೆ, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವ ನೆಪದಲ್ಲಿ ಕೆಲ ಪ್ರವಾಸಿಗರು ಅಪಾಯಕಾರಿ ಜಾಗಗಳಲ್ಲಿ ನಿಂತು ಹುಚ್ಚಾಟ ಮೆರೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಮಳೆಯಿಂದಾಗಿ ಬಂಡೆಗಳು ನುಣುಪಾಗಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಈ ಕಠಿಣ ನಿರ್ಧಾರ ಕೈಗೊಂಡಿದೆ.
ಸಾಮಾನ್ಯವಾಗಿ ಪ್ರವಾಸಿಗರು ಬೆಳಗಾವಿ ಮತ್ತು ಗೋವಾ ಮುಖ್ಯ ರಸ್ತೆಯ ಮಾರ್ಗವಾಗಿ ಈ ಮನಮೋಹಕ ಡೆಲ್ಟಾ ಫಾಲ್ಸ್‌ಗೆ ಭೇಟಿ ನೀಡುತ್ತಿದ್ದರು.
ಆದರೆ ಈಗ ಮುನ್ನೆಚ್ಚರಿಕೆ ಕ್ರಮವಾಗಿ, ಫಾಲ್ಸ್‌ಗೆ ಪ್ರವೇಶಿಸುವ ಮುಖ್ಯ ರಸ್ತೆಯಲ್ಲಿಯೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಿಗಿ ಕಾವಲು ನಿಂತಿದ್ದಾರೆ.
ಮುನ್ನಡೆಯುವ ದಾರಿಯಲ್ಲಿ "ಜಲಪಾತಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ" ಎಂಬ ಅಧಿಕೃತ ನಾಮಫಲಕವನ್ನು (ಬೋರ್ಡ್) ಅಳವಡಿಸಲಾಗಿದೆ.
ಇಷ್ಟೇ ಅಲ್ಲದೆ, ಪ್ರವಾಸಿಗರು ಕದ್ದುಮುಚ್ಚಿ ಒಳಗೆ ಹೋಗುವುದನ್ನು ತಡೆಯಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ.
ಕಣ್ತಪ್ಪಿಸಿ ಜಲಪಾತದತ್ತ ಕಾಲುನಡಿಗೆಯಲ್ಲಿ ತೆರಳುತ್ತಿದ್ದ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿ, ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಸಿಬ್ಬಂದಿಗಳು ನಿರಂತರವಾಗಿ ಜಾಗದಲ್ಲಿ ಗಸ್ತು ತಿರುಗುತ್ತಿದ್ದು, ಯಾವುದೇ ವಾಹನ ಅಥವಾ ವ್ಯಕ್ತಿಗಳು ಫಾಲ್ಸ್‌ನತ್ತ ಸುಳಿಯದಂತೆ ಹದ್ದಿನ ಕಣ್ಣು ಇಟ್ಟಿದ್ದಾರೆ.


