ಬೆಳಗಾವಿ : ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಈಗಾಗಲೇ ಉತ್ತಮ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಮುನಿಸಿಕೊಂಡಿದ್ದ ಮಳೆರಾಯ ಈಗ ತಡವಾಗಿಯಾದರೂ ಅಬ್ಬರಿಸುತ್ತಿರುವುದು ರೈತರಿಗೆ ಆಶಾದಾಯಕವಾಗಿದೆ. ರೈತರ ಹಿತದೃಷ್ಟಿಗೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಇನ್ನೂ ಸಮರ್ಪಕವಾಗಿ ಮಳೆಯಾಗದಿದ್ದರೂ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅಲ್ಲಿಯೂ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಈ ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸುಚ ಭರವಸೆ ಇದೆ.
ರಾಮದುರ್ಗ, ಸವದತ್ತಿ ಭಾಗದಲ್ಲೂ ಮಳೆ ನಿರೀಕ್ಷೆ
ಜಿಲ್ಲೆಯ ರಾಮದುರ್ಗ ಮತ್ತು ಸವದತ್ತಿ ಸೇರಿದಂತೆ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಇನ್ನೂ ಸಮರ್ಪಕವಾಗಿ ಮಳೆಯಾಗಿಲ್ಲ ಎನ್ನುವುದು ನಿಜ. ಆದರೆ, ರೈತರು ಧೃತಿಗೆಡಬೇಕಾಗಿಲ್ಲ, ಏಕೆಂದರೆ ಮುಂದಿನ ಎಂಟು ದಿನಗಳಲ್ಲಿ ಆ ಭಾಗಗಳಲ್ಲೂ ಉತ್ತಮ ಮಳೆಯಾಗುವ ಎಲ್ಲಾ ನಿರೀಕ್ಷೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಆರಂಭಿಸಲಾಗಿದೆ. ಅದೇ ಮಾದರಿಯಲ್ಲಿ ಒಂದು ವೇಳೆ ಬೆಳಗಾವಿ ಜಿಲ್ಲೆಗೂ ಅದರ ಅಗತ್ಯ ಎನಿಸಿದರೆ, ಇಲ್ಲಿಯೂ ಮೋಡ ಬಿತ್ತನೆ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸ್ಪಷ್ಟಪಡಿಸಿದರು.


