ಬೆಳಗಾವಿ: ಆರಂಭದಲ್ಲಿ ಕ್ಷೀಣಗೊಂಡಿದ್ದ ಮುಂಗಾರು ಈಗ ತನ್ನ ಚುರುಕು ಪಡೆದು ಆರ್ಭಟಿಸುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿಸಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪನದಿಗಳ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗಿದೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸುಮಾರು 78 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಜಿಲ್ಲೆಯ ಹಲವು ಕೆಳಹಂತದ ಸೇತುವೆಗಳು ಜಲಾವೃತವಾಗಿವೆ.
ದೂಧಗಂಗಾ, ವೇದಗಂಗಾ ಸೇರಿದಂತೆ ಕೃಷ್ಣಾ ಉಪನದಿಗಳು, ಮಲಪ್ರಭಾ ಮೈದುಂಬಿ ಹರಿಯುತ್ತಿವೆ.
ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಕರದಗಾ-ಭೋಜ, ಭಾರವಾಡ-ಕುಣ್ಣೂರ, ಅಕ್ಕೋಳ-ಸಿದ್ನಾಳ, ಯಡೂರು-ಕಲ್ಲೋಳ, ಜತ್ರಾಟ- ಭೀವಶಿ, ಭೋಜವಾಡಿ- ಗಜಭರವಾಡಿ, ಮಲಿಕವಾಡ- ದತ್ತವಾಡ ಹಾಗೂ ಮಾಂಜರಿ-ಭಾವನಸೌಂದತ್ತಿ ಸೇರಿದಂತೆ ಏಳಕ್ಕೂ ಹೆಚ್ಚು ಕೆಳಹಂತದ ಸೇತುವೆಗಳು ಜಲಾವೃತವಾಗಿವೆ.
ಸದ್ಯ ನದಿಗಳ ನೀರಿನ ಮಟ್ಟ ಏರಿಕೆಯಲ್ಲಿದ್ದರೂ, ನದಿ ತೀರದ ಗ್ರಾಮಗಳಲ್ಲಿ ಆತಂಕದ ಪರಿಸ್ಥಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ.
ಚಿಕ್ಕೋಡಿ ತಾಲೂಕಿನ ಮಲಿಕವಾಡ ಬಳಿ ದೂಧಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ಕೆಲವರು ನಿರ್ಲಕ್ಷ್ಯ ಪ್ರದರ್ಶಿಸುತ್ತಿದ್ದಾರೆ.
ನಡುಮಟ್ಟದವರೆಗೆ ನೀರಿನಲ್ಲಿ ಇಳಿದು ವೃದ್ಧನೊಬ್ಬ ಮೀನು ಹಿಡಿಯುತ್ತಿರುವ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದರೂ ಅಪಾಯವನ್ನು ಲೆಕ್ಕಿಸದಿರುವುದು ಕಳವಳಕ್ಕೆ ಕಾರಣವಾಗಿದೆ.


