ಇಂಗ್ಲಿಷ್‌ನಲ್ಲೂ ರಾಜ್ಯವನ್ನು 'ಪಶ್ಚಿಮ ಬಂಗಾ' ಎಂದು ಹೆಸರಿಸಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೋಮವಾರ ಘೋಷಿಸಿದ್ದಾರೆ.
ಈ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಡಿಸೆಂಬರ್ 9ರಂದು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೋಲ್ಕತ್ತಾದ ರಾಜ್ಯ ಸಚಿವಾಲಯದಲ್ಲಿ ಅಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಈ ನಿರ್ಧಾರ ಹೊರಬಿದ್ದಿದೆ.
ಹೆಸರು ಬದಲಾವಣೆ ಯೋಜನೆಯ ಜತೆಗೆ, ವಿವಿಧ ಇಲಾಖೆಗಳಲ್ಲಿ 10,146 ನೇಮಕಾತಿಗಳಿಗೆ ಸಂಪುಟ ಅನುಮೋದನೆ ನೀಡಿದೆ, ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳಿಗೆ ಪರೀಕ್ಷಾ ಶುಲ್ಕವನ್ನು ಮನ್ನಾ ಮಾಡಿದೆ, ಗೋಕುಲ ಮಿಷನ್ ಅಡಿಯಲ್ಲಿ ಗೋಶಾಲೆಗಳಿಗೆ 1 ಲಕ್ಷ ರೂಪಾಯಿ ನೆರವು ಘೋಷಿಸಿದೆ ಮತ್ತು ವಿಧಾನಸಭೆಯ ಚಳಿಗಾಲದ ಅಧಿವೇಶನದ ಆರಂಭ ದಿನಾಂಕವಾಗಿ ಡಿಸೆಂಬರ್ 4ನ್ನು ನಿಗದಿಪಡಿಸಿದೆ.
ಸೋಮವಾರ ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧಿಕಾರಿ, ಪ್ರಸ್ತಾವಿತ ಬದಲಾವಣೆಯು 1947ರಲ್ಲಿ ಪಶ್ಚಿಮ ಬಂಗಾಳ ರಚನೆಯ ಸುತ್ತಲಿನ ಇತಿಹಾಸದಲ್ಲಿ ಬೇರೂರಿದೆ ಎಂದು ಹೇಳಿ, ಈ ಕ್ರಮ ಅಗತ್ಯವೆಂದು ಬಣ್ಣಿಸಿದ್ದಾರೆ.
ಇಂಗ್ಲಿಷ್‌ನಲ್ಲೂ ಪಶ್ಚಿಮ ಬಂಗಾಳವು 'ಪಶ್ಚಿಮ ಬಂಗಾ' ಆಗಿರಲಿದೆ ಮತ್ತು ಇದನ್ನು ಇರುವಂತೆಯೇ ನಿಖರವಾಗಿ ಬರೆಯಬೇಕು ಎಂದು ಅಧಿಕಾರಿ ಹೇಳಿದ್ದಾರೆ. 9ನೇ ತಾರೀಖಿನಂದು ವಿಧಾನಸಭೆಯಲ್ಲಿ ನಿರ್ಣಯ ತರುತ್ತಿದ್ದು, ಅದರ ನಂತರ ಅದು ಭಾರತ ಸರ್ಕಾರಕ್ಕೆ ಮತ್ತು ಬಳಿಕ ಸಂಸತ್ತಿಗೆ ಹೋಗಲಿದೆ ಎಂದು ಅವರು ತಿಳಿಸಿದ್ದಾರೆ. ವಿಭಜನೆಯ ಸಂದರ್ಭದಲ್ಲಿ 1947ರ ಜೂನ್ 20ರಂದು ರಾಜ್ಯ ರಚನೆಯಾದ ಇತಿಹಾಸಕ್ಕೆ ಈ ಬದಲಾವಣೆಯನ್ನು ತಳಕು ಹಾಕಿದ ಅಧಿಕಾರಿ, 'ಪಶ್ಚಿಮ ಬಂಗಾ' ಎಂಬ ಹೆಸರನ್ನು ಇಂಗ್ಲಿಷ್‌ನಲ್ಲಿ ಅದೇ ರೀತಿ ನಿಖರವಾಗಿ ಬರೆಯಬೇಕು ಎಂದಿದ್ದಾರೆ.
ಸಂಪುಟವು ಇಂದು ಅನುಮೋದನೆ ನೀಡಿದ್ದು, 9ನೇ ತಾರೀಖಿನಂದು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಗುವುದು, ಇದು ಇತಿಹಾಸದ ವಿಷಯವಾಗಿದ್ದು, 1947ರಲ್ಲಿ ನಡೆದ ಪಶ್ಚಿಮ ಬಂಗಾಳ ರಚನೆಯ ಸುತ್ತಲಿನ ಇತಿಹಾಸವಾಗಿದೆ ಹಾಗೂ 'ವೆಸ್ಟ್ ಬೆಂಗಾಲ್' ಬದಲಿಗೆ 'ಪಶ್ಚಿಮ ಬಂಗಾ' ಆಗಲಿದೆ ಎಂದು ಅವರು ಹೇಳಿದ್ದಾರೆ. ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರವಾದ ನಂತರ, ಸಂಸದೀಯ ಮತ್ತು ಕಾನೂನು ಪ್ರಕ್ರಿಯೆಗಳಿಗಾಗಿ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಭಾರತ ಸಂವಿಧಾನದ 3ನೇ ವಿಧಿಯ ಅಡಿಯಲ್ಲಿ, ರಾಜ್ಯದ ಹೆಸರು ಬದಲಾಯಿಸಲು ಸಂಸತ್ತಿನಿಂದ ಜಾರಿಯಾದ ಕಾನೂನು ಅಗತ್ಯವಿದೆ.


