ವಾಷಿಂಗ್ಟನ್: ಸಾಮಾನ್ಯವಾಗಿ ಕತ್ತರಿಸಿದ ಕೂದಲನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಆ ಕೂದಲು ಇತಿಹಾಸ ಪ್ರಸಿದ್ಧ ವ್ಯಕ್ತಿಯದ್ದಾಗಿದ್ದರೆ ಅದಕ್ಕೆ ಚಿನ್ನಕ್ಕಿಂತಲೂ ಹೆಚ್ಚಿನ ಬೆಲೆ ಬರುತ್ತದೆ ಎಂಬುದಕ್ಕೆ ಅಮೆರಿಕದಲ್ಲಿ (America ) ನಡೆದ ಹರಾಜು ಪ್ರಕ್ರಿಯೆಯೊಂದು ಸಾಕ್ಷಿಯಾಗಿದೆ.
ಅಮೆರಿಕದ (America ) ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ (George Washington) ಅವರಿಗೆ ಸೇರಿದ ಕೂದಲಿನ ಒಂದು ತುಣುಕು ಹರಾಜಿನಲ್ಲಿ ಬರೋಬ್ಬರಿ 4,000 ಡಾಲರ್‌ಗೆ (ಸುಮಾರು 3.5 ಲಕ್ಷ ರೂಪಾಯಿ) ಮಾರಾಟವಾಗಿದೆ.
ಈ ಕೂದಲಿನ ತುಣುಕು ಜಾನ್ ಗ್ಯಾಡ್ಸ್‌ಬಿ (John Gadsby) ಎಂಬುವವರಿಗೆ ಸೇರಿದ್ದಾಗಿತ್ತು. 1799ರಲ್ಲಿ ವಾಷಿಂಗ್ಟನ್ ಅವರಿಗೆ ಗ್ಯಾಡ್ಸ್‌ಬಿ ಔತಣಕೂಟ ಏರ್ಪಡಿಸಿದ್ದರು.
ವಾಷಿಂಗ್ಟನ್ ಅವರ ನಿಧನಕ್ಕೂ ಸ್ವಲ್ಪ ಮುನ್ನ ಈ ಔತಣಕೂಟ ನಡೆದಿತ್ತು ಎನ್ನಲಾಗಿದೆ. ಸ್ನೇಹದ ಸಂಕೇತವಾಗಿ ಗಾಡ್ಸ್‌ಬಿ ಅವರಿಗೆ ವಾಷಿಂಗ್ಟನ್ ಅವರ ಕೆಲವು ಕೂದಲುಗಳು ಲಭಿಸಿದ್ದವು. ಗಾಡ್ಸ್‌ಬಿ ಕುಟುಂಬಸ್ಥರು ಅವುಗಳನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು.
ಈ ಕೂದಲಿನ ತುಣುಕು ವಾಷಿಂಗ್ಟನ್ ಅವರಿಗೆ ಸೇರಿದ್ದು ಎಂಬುದಕ್ಕೆ ಗ್ಯಾಡ್ಸ್‌ಬಿ ಅವರ ಮೊಮ್ಮಗಳು ಜೂಲಿಯಾ ಟೆನ್ ಐಕ್ ಮೆಕ್‌ಬ್ಲೇರ್ ಅವರು 1928ರಲ್ಲಿ ಬರೆದಿದ್ದ ದಾಖಲೆಯಲ್ಲಿ ಮಾಹಿತಿ ಉಲ್ಲೇಖವಾಗಿದೆ.
ತಮ್ಮ ಅಜ್ಜ ಜಾರ್ಜ್ ವಾಷಿಂಗ್ಟನ್ ಅವರೊಂದಿಗೆ ಹೊಂದಿದ್ದ ಸ್ನೇಹ ಮತ್ತು ಒಡನಾಟದ ನೆನಪಿಗಾಗಿ ಈ ಕೂದಲಿನ ತುಣುಕನ್ನು ಸಂಗ್ರಹಿಸಿದ್ದರು ಎಂದು ಅವರು ದಾಖಲೆಯಲ್ಲಿ ತಿಳಿಸಿದ್ದಾರೆ. ಬಳಿಕ ಅದನ್ನು ಚೌಕಟ್ಟಿನಲ್ಲಿ ಜೋಡಿಸಿ, ವಾಷಿಂಗ್ಟನ್ ಅವರ ಭಾವಚಿತ್ರದ ಕೆಳಗೆ ಮನೆಯೊಂದರಲ್ಲಿ ನೇತುಹಾಕಲಾಗಿತ್ತು.
ತಮ್ಮ ಜೀವನದುದ್ದಕ್ಕೂ ಅದನ್ನು ನೋಡಿರುವುದಾಗಿ ಮೊಮ್ಮಗಳು ನೆನಪಿಸಿಕೊಂಡಿದ್ದಾರೆ. ಅಲ್ಲದೆ, 1798 ಮತ್ತು 1799ರಲ್ಲಿ ವಾಷಿಂಗ್ಟನ್ ಅವರ ಜನ್ಮದಿನದ ಆಚರಣೆಗಳಿಗೂ ಗ್ಯಾಡ್ಸ್‌ಬಿ ಆತಿಥ್ಯ ವಹಿಸಿದ್ದರು ಎಂದು ಹರಾಜು ಸಂಸ್ಥೆ ತಿಳಿಸಿದೆ.


