ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲ್ಲೂಕಿನ ಚಿತ್ತರಗಿ ಗ್ರಾಮದಲ್ಲಿ ಹೊಸ ಸದಸ್ಯರಿಗೆ ಹಸಿರು ಶಾಲು ನೀಡಿ ಸೇರ್ಪಡೆಗೊಳಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಡಿಸೆಂಬರ್ 8ರಂದು ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯದ ಎಲ್ಲ ರೈತ ಸಂಘಟನೆಗಳು ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ರೈತರಿಗೆ ಶಾಶ್ವತ ನೆಮ್ಮದಿ ಮತ್ತು ಆರ್ಥಿಕ ಭದ್ರತೆ ದೊರೆಯಲು ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಪೂರ್ಣವಾಗಿ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು. ಕಬ್ಬಿನ ಬಿಲ್ ಆರಂಭದಲ್ಲೇ ಟನ್‌ಗೆ 3800 ರೂಪಾಯಿ ಸಿಕ್ಕಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ ಎಂದರು.
ಹುನಗುಂದ ಸುತ್ತಮುತ್ತ ಸಮರ್ಪಕ ನೀರಾವರಿ ಇಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದು, ಮಹದಾಯಿ ಮತ್ತು ಕಾಳಿ ನದಿಯಿಂದ ಮಲಪ್ರಭಾ ನದಿಗೆ ನೀರು ಎತ್ತುವ ಯೋಜನೆ ಜಾರಿಗೊಳಿಸಬೇಕು, ಬಾಕಿ ಉಳಿದಿರುವ ಮಹದಾಯಿ ಕಾಮಗಾರಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೀಘ್ರ ಪೂರ್ಣಗೊಳಿಸಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಈ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವ ವಿಷಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ನವೆಂಬರ್ 26ರವರೆಗೆ ಸಮಯ ನೀಡಲಾಗಿದೆ.
ಬೇಡಿಕೆ ಈಡೇರದಿದ್ದರೆ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಸೇರಿದಂತೆ ದೇಶದ 7-8 ರಾಜ್ಯಗಳ ರೈತರ ಜೊತೆಗೂಡಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.


