ಬೆಳಗಾವಿ : ಡಿಸೆಂಬರ್ 2ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನಕ್ಕೆ ಈ ಬಾರಿ ಪ್ರತಿಭಟನೆಗಳ (Protest) ಕಾವು ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ಸರ್ಕಾರದ ಗಮನ ಸೆಳೆಯಲು ರೈತರು, ನೌಕರರು, ಕಾರ್ಮಿಕರು, ವಕೀಲರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಸಜ್ಜಾಗಿವೆ.
ಈಗಾಗಲೇ 58 ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದು, ಒಟ್ಟು 150ಕ್ಕೂ ಹೆಚ್ಚು ಸಂಘಟನೆಗಳು ಹೋರಾಟ ನಡೆಸುವ ಸಾಧ್ಯತೆಯಿದೆ.
ಕಬ್ಬು ಬೆಳೆಗಾರರ ಬೇಡಿಕೆ ಈ ಬಾರಿಯೂ ಪ್ರಮುಖ ವಿಚಾರವಾಗಲಿದೆ. ಪ್ರತಿ ಟನ್ ಕಬ್ಬಿಗೆ 3,850 ರೂ. ದರ ನಿಗದಿಪಡಿಸುವುದರ ಜತೆಗೆ ರಾಜ್ಯ ಸರ್ಕಾರದಿಂದ 1,000 ರೂ. ಪ್ರೋತ್ಸಾಹಧನ ನೀಡಬೇಕು ಎಂಬುದು ರೈತರ ಒತ್ತಾಯ. ಹಿಂದಿನ ಹೋರಾಟದ ಬಳಿಕ ತಾತ್ಕಾಲಿಕವಾಗಿ ದರದ ವಿಚಾರ ಬಗೆಹರಿದಿದ್ದರೂ, ರೈತರ ಬೇಡಿಕೆಗಳು ಸಂಪೂರ್ಣ ಈಡೇರಿಲ್ಲ ಎಂಬ ಅಸಮಾಧಾನವಿದೆ. ಬೆಳೆ ನಷ್ಟ ಪರಿಹಾರ ಮತ್ತು ಸಾಲ ಮನ್ನಾ ವಿಚಾರಗಳನ್ನೂ ಮುಂದಿಟ್ಟುಕೊಂಡು ರೈತರು ಪ್ರತಿಭಟನೆ ನಡೆಸಲಿದ್ದಾರೆ.
ಇನ್ನೊಂದೆಡೆ, ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆ ಮತ್ತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.
ವಕೀಲರ ಮೇಲಿನ ಹಲ್ಲೆ ತಡೆಗೆ ರಕ್ಷಣಾ ಕಾಯಿದೆ ಬಲಪಡಿಸಬೇಕು ಎಂಬುದು ನ್ಯಾಯವಾದಿಗಳ ಆಗ್ರಹ. ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಣ ಇಲಾಖೆ ನೌಕರರು ಸೇವಾ ಭದ್ರತೆಗಾಗಿ ಧ್ವನಿ ಎತ್ತಲಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಸಿಬ್ಬಂದಿ ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಲಿದ್ದಾರೆ. ಶಾಲೆಗಳಲ್ಲಿ ಬಿಸಿಯೂಟವನ್ನು ಸ್ಥಳದಲ್ಲೇ ತಯಾರಿಸುವ ವ್ಯವಸ್ಥೆ ಮುಂದುವರಿಸಿ, ಕ್ಲಸ್ಟರ್ ಕಿಚನ್ ಯೋಜನೆ ಕೈಬಿಡಬೇಕೆಂಬ ಬೇಡಿಕೆಯೂ ಇದೆ.


