ಬೆಂಗಳೂರು: ಆನ್‌ಲೈನ್ ಮೂಲಕ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ತ್ವರಿತವಾಗಿ ತಲುಪಿಸುವ ಬ್ಲಿಂಕಿಟ್ ಇದೀಗ ತುರ್ತು ಆರೋಗ್ಯ ಸೇವಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿರುವ ಕಂಪನಿ, ಮೊದಲ ಹಂತದಲ್ಲಿ ನಗರದ ನಾಲ್ಕು ಪ್ರಮುಖ ಪ್ರದೇಶಗಳಿಗೆ ಈ ಸೌಲಭ್ಯವನ್ನು ಸೀಮಿತಗೊಳಿಸಿದೆ.
ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಜನರು ಬ್ಲಿಂಕಿಟ್ ಆಯಪ್ ಮೂಲಕವೇ ಆಂಬ್ಯುಲೆನ್ಸ್ ಸೇವೆಗೆ ಮನವಿ ಸಲ್ಲಿಸಬಹುದಾಗಿದೆ.
ಆರಂಭಿಕ ಹಂತದಲ್ಲಿ ಬ್ಲಿಂಕಿಟ್ ಬೆಂಗಳೂರಿನಲ್ಲಿ ನಾಲ್ಕು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದೆ. ಎರಡು ಡಿಪೋಗಳ ಮೂಲಕ ಈ ಸೇವೆಯನ್ನು ನಿರ್ವಹಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸುವ ಉದ್ದೇಶವನ್ನು ಕಂಪನಿ ಹೊಂದಿದೆ.
ಬೆಂಗಳೂರಿನ ಯಾವೆಲ್ಲ ಪ್ರದೇಶಗಳಲ್ಲಿ ಬ್ಲಿಂಕಿಟ್ ಆಂಬ್ಯುಲೆನ್ಸ್ ಸೇವೆ?
ಸದ್ಯ ಬೆಂಗಳೂರಿನ ನಾಲ್ಕು ಪ್ರದೇಶಗಳಲ್ಲಿ ಮಾತ್ರ ಬ್ಲಿಂಕಿಟ್ ಆಂಬ್ಯುಲೆನ್ಸ್ ಸೇವೆ ಲಭ್ಯವಿದೆ.
ಡೊಮ್ಲೂರು (Domlur)
ಇಂದಿರಾನಗರ (Indiranagar)
ಬಿಟಿಎಂ ಲೇಔಟ್ (BTM Layout)
ಬೊಮ್ಮನಹಳ್ಳಿ (Bommanahalli)
ಈ ಪ್ರದೇಶಗಳಲ್ಲಿ ವಾಸಿಸುವ ಜನರು ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದಾಗ ಬ್ಲಿಂಕಿಟ್ ಆಯಪ್ ಮೂಲಕ ಆಂಬ್ಯುಲೆನ್ಸ್ ಸೇವೆಯನ್ನು ಕೋರಬಹುದು.
ಸದ್ಯಕ್ಕೆ ಈ ನಾಲ್ಕು ಪ್ರದೇಶಗಳಿಗೆ ಮಾತ್ರ ಸೇವೆ ಸೀಮಿತವಾಗಿದ್ದು, ಬೆಂಗಳೂರಿನ ಉಳಿದ ಭಾಗಗಳಿಗೆ ಯಾವಾಗ ವಿಸ್ತರಿಸಲಾಗುತ್ತದೆ ಎಂಬುದರ ಕುರಿತು ಕಂಪನಿ ಮಾಹಿತಿ ನೀಡಿಲ್ಲ.
ಬ್ಲಿಂಕಿಟ್ ಆಯಪ್ ಮೂಲಕವೇ ಆಂಬ್ಯುಲೆನ್ಸ್ ಬುಕ್ಕಿಂಗ್
ಬ್ಲಿಂಕಿಟ್ ಆಂಬ್ಯುಲೆನ್ಸ್ ಸೇವೆಯ ಪ್ರಮುಖ ವಿಶೇಷತೆಯೆಂದರೆ, ಬಳಕೆದಾರರು ಪ್ರತ್ಯೇಕವಾಗಿ ಬೇರೆ ಆಯಪ್ ಬಳಸುವ ಅಗತ್ಯವಿಲ್ಲ. ಬ್ಲಿಂಕಿಟ್ ಆಯಪ್‌ನಲ್ಲಿಯೇ ತುರ್ತು ಆಂಬ್ಯುಲೆನ್ಸ್ ಸೇವೆಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


