ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದ ಆಂತರಿಕ ರಾಜಕೀಯ ಚಟುವಟಿಕೆಗಳ ನಡುವೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (Bk Hariprasad) ಅವರ ಅನಿರೀಕ್ಷಿತ ಭೇಟಿ ಗಮನ ಸೆಳೆದಿದೆ.
ಭಾನುವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದ ಇಬ್ಬರೂ ನಾಯಕರು ಕೆಲಕಾಲ ಮಾತುಕತೆ ನಡೆಸಿದ್ದು, ಬಳಿಕ ತಮ್ಮ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ.
ಸಚಿವರ ಈ ದಿಢೀರ್ ಭೇಟಿಯ ಹಿಂದಿನ ಉದ್ದೇಶವೇನು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.
ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹರಿಪ್ರಸಾದ್ ಮಂಗಳೂರಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಖಾಸಗಿ ಹೆಲಿಕಾಪ್ಟರ್ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದ ಒಳಭಾಗದಲ್ಲೇ ಇಬ್ಬರೂ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ವಿಶೇಷವೆಂದರೆ, ಮಂಗಳೂರಿಗೆ ಬಂದ ಸಚಿವರು ವಿಮಾನ ನಿಲ್ದಾಣದಿಂದ ಹೊರಗೆ ತೆರಳದೆ ಅಲ್ಲಿಂದಲೇ ಬೆಂಗಳೂರಿಗೆ ವಾಪಸಾಗಿದ್ದಾರೆ.
ಇತ್ತ ಹರಿಪ್ರಸಾದ್ ಪುತ್ತೂರಿನ ಕಾರ್ಯಕ್ರಮದತ್ತ ಪ್ರಯಾಣ ಬೆಳೆಸಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಭೇಟಿಯ ಬಗ್ಗೆ ಸ್ಥಳೀಯ ಕಾಂಗ್ರೆಸ್ ನಾಯಕರಿಗೂ ಮಾಹಿತಿ ಇರಲಿಲ್ಲ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಭಾವ ಹೊಂದಿರುವ ಇಬ್ಬರು ನಾಯಕರ ನಡುವಿನ ಈ ಮಾತುಕತೆ ಸಹಜವಾಗಿಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಕ್ಷದ ಬೆಳವಣಿಗೆಗಳು ಅಥವಾ ಬೇರೆ ಯಾವುದಾದರೂ ಮಹತ್ವದ ವಿಚಾರದ ಕುರಿತು ಚರ್ಚೆ ನಡೆದಿದೆಯೇ ಎಂಬ ಕುತೂಹಲವಿದ್ದರೂ, ಭೇಟಿಯ ಉದ್ದೇಶದ ಬಗ್ಗೆ ಇಬ್ಬರೂ ನಾಯಕರು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಮಾತುಕತೆಯ ವಿವರಗಳು ಸದ್ಯಕ್ಕೆ ಗೌಪ್ಯವಾಗಿಯೇ ಉಳಿದಿವೆ.


