ಹುಬ್ಬಳ್ಳಿ: ಸಂತಾನಹೀನತೆ(Infertility) ಸಮಸ್ಯೆಯಿಂದ ಬಳಲುತ್ತಿರುವ ಬಡ ದಂಪತಿಗಳಿಗೆ ರಾಜ್ಯ ಸರ್ಕಾರ(State Government) ಸಿಹಿಸುದ್ದಿ ನೀಡಿದ್ದು, ಹುಬ್ಬಳ್ಳಿಯ(Hubli) ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (KMC-RI) ಆಸ್ಪತ್ರೆ ಆವರಣದಲ್ಲಿ ರಾಜ್ಯದ ಮೊದಲ ಸರ್ಕಾರಿ ಐವಿಎಫ್ (IVF) ಕೇಂದ್ರ ಸ್ಥಾಪನೆಯಾಗಿದೆ.
ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಮತ್ತು ನುರಿತ ತಜ್ಞರ ತಂಡವನ್ನು ಒಳಗೊಂಡಿರುವ ಈ ಕೇಂದ್ರವು ಡಿಸೆಂಬರ್ 5ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.
ಸಿಎಸ್ಆರ್ ನಿಧಿಯಡಿ ನಿರ್ಮಾಣ, ಪರಿಣಿತ ವೈದ್ಯರ ನೇಮಕ
ಈ ಮಹತ್ವಾಕಾಂಕ್ಷಿ ಕೇಂದ್ರದ ಸ್ಥಾಪನೆಗೆ ಕಲಬುರಗಿ ಮಾನವೀಯ ಕಲ್ಯಾಣ ಟ್ರಸ್ಟ್ ₹90 ಲಕ್ಷ ಹಾಗೂ ಹಟ್ಟಿ ಗೋಲ್ಡ್ ಮೈನ್ಸ್ ಸಂಸ್ಥೆಯು ₹40 ಲಕ್ಷ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ನೀಡಿವೆ. ಕೇಂದ್ರದಲ್ಲಿ ಭ್ರೂಣಶಾಸ್ತ್ರಜ್ಞರು ಮತ್ತು ಫಲವತ್ತತೆ ತಜ್ಞರು ಸೇರಿದಂತೆ ಏಳು ಮಂದಿ ಪರಿಣಿತ ವೈದ್ಯಕೀಯ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳ ದಂಪತಿಗಳಿಗೆ ಸರ್ಕಾರಿ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಐವಿಎಫ್ ಚಿಕಿತ್ಸೆ ನೀಡುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿದೆ.


