ಬೆಂಗಳೂರು : ನಕಲಿ ಅಂಕಪಟ್ಟಿ ಸೃಷ್ಟಿ ಮತ್ತು ಅಂಕಗಳ ತಿದ್ದುಪಡಿ ವಂಚನೆಗೆ ಕಡಿವಾಣ ಹಾಕಲು ಕರ್ನಾಟಕ ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. 2026-27ನೇ ಶೈಕ್ಷಣಿಕ ವರ್ಷದಿಂದ SSLC ಮತ್ತು PUC ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ.
ಈ ಹೊಸ ವ್ಯವಸ್ಥೆಯಡಿ ವಿದ್ಯಾರ್ಥಿಗಳು ತಮ್ಮ ಅಧಿಕೃತ ಮಾರ್ಕ್ಸ್‌ಕಾರ್ಡ್ ಅನ್ನು ಡಿಜಿಲಾಕರ್ ಮೂಲಕವೇ ಮೊಬೈಲ್‌ನಲ್ಲಿ ಪಡೆದುಕೊಳ್ಳಬಹುದು. ಈ ಡಿಜಿಟಲ್ ಅಂಕಪಟ್ಟಿಗೆ ಸಂಪೂರ್ಣ ಅಧಿಕೃತ ಮಾನ್ಯತೆ ಇರಲಿದ್ದು, ವಿದ್ಯಾರ್ಥಿಗಳು ಅಂಕಪಟ್ಟಿ ಪಡೆಯಲು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ ಹಾಗೂ ಕಾಗದದ ಅಂಕಪಟ್ಟಿ ಕಳೆದುಹೋಗುವ ಆತಂಕವೂ ದೂರವಾಗಲಿದೆ. ಉನ್ನತ ಶಿಕ್ಷಣ ಪ್ರವೇಶಾತಿ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ಇದನ್ನು ಅಧಿಕೃತ ದಾಖಲೆಯಾಗಿ ಬಳಸಬಹುದು.
ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತವಾಗಿಡಲು ಅಂಕಪಟ್ಟಿಯನ್ನು APAAR ID ಜೊತೆ ಲಿಂಕ್ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.
ಈ ಡಿಜಿಟಲ್ ವ್ಯವಸ್ಥೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾದರೆ ಅವುಗಳನ್ನು ಪರಿಹರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಈ ನಿರ್ಧಾರದಿಂದ ಕಾಗದದ ಅಂಕಪಟ್ಟಿಗಳ ಮೇಲಿನ ಅವಲಂಬನೆ ಕಡಿಮೆಯಾಗಿ ದಾಖಲೆಗಳ ವಿಶ್ವಾಸಾರ್ಹತೆ ಹೆಚ್ಚಾಗಲಿದೆ.


