ಅಮೆರಿಕ: ಟೆಕ್ಸಾಸ್‌ನ (Texas) ಮಹಿಳೆಯೊಬ್ಬರು ತಮ್ಮ ಮುಖದ ಶಸ್ತ್ರಚಿಕಿತ್ಸೆ (facial surgery) ವೇಳೆ ತೆಗೆದುಹಾಕಲಾದ ಮೂಳೆಯ ತುಣುಕುಗಳನ್ನೇ ಸುಂದರವಾದ ಕಿವಿಯೋಲೆಗಳನ್ನಾಗಿ (earrings) ಮಾಡಿಸಿಕೊಂಡಿದ್ದಾರೆ. ಈಕೆಯ ವಿಭಿನ್ನ ಆಲೋಚನೆ ಹಾಗೂ ಅದರ ಹಿಂದಿನ ಭಾವನಾತ್ಮಕ ಕಾರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ.
40ರ ಹರೆಯದ ಆಬ್ರೆ (Aubrey) ಎಂಬ ಮಹಿಳೆ ಈ ವಿಶೇಷ ಆಭರಣಗಳನ್ನು ಮಾಡಿಸಿಕೊಂಡವರು. ತಮ್ಮ ಮುಖದ ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ತೆಗೆದ ಮೂಳೆಯ ಸಣ್ಣ ತುಣುಕುಗಳನ್ನು ತಮಗೆ ನೀಡುವಂತೆ ಶಸ್ತ್ರಚಿಕಿತ್ಸಕರ ಬಳಿ ಮನವಿ ಮಾಡಿದ್ದರು. ವೈದ್ಯರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಬಳಿಕ ಆ ಮೂಳೆಯ ತುಣುಕುಗಳನ್ನು ಆಭರಣವಾಗಿ ಪರಿವರ್ತಿಸುವ ನಿರ್ಧಾರಕ್ಕೆ ಬಂದಿದ್ದರು.
ಲಿಂಗ ಪರಿವರ್ತನೆಯ ಪ್ರಯಾಣದ ನೆನಪಿಗಾಗಿ ವಿಶೇಷ ಆಭರಣ
ಸಂದರ್ಶನವೊಂದರಲ್ಲಿ ಆಬ್ರೆ ಮಾತನಾಡಿ, ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ಹಂಚಿಕೊಂಡಿದ್ದಾರೆ. ತಾನು ಬಾಲ್ಯದಿಂದಲೂ ಇತರರಿಗಿಂತ ಭಿನ್ನವಾಗಿದ್ದೇನೆ ಎಂಬ ಅರಿವಿದ್ದರೂ, ತಾನು ಟ್ರಾನ್ಸ್‌ಜೆಂಡರ್ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಬಹಳ ಸಮಯ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.
ಆದರೆ ಒಂದು ಹಂತದಲ್ಲಿ ತನ್ನ ನಿಜವಾದ ಗುರುತನ್ನು ಒಪ್ಪಿಕೊಂಡು, ಕುಟುಂಬದವರು ಹಾಗೂ ಪ್ರೀತಿಪಾತ್ರರ ಮುಂದೆ ಅದನ್ನು ಬಹಿರಂಗಪಡಿಸುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.


