ಯೆಮೆನ್ ದೇಶದ ಅಲ್ ವಾಜಿಯಾ ಜಿಲ್ಲೆಯಲ್ಲಿ ಸೌದಿ ಅರೇಬಿಯಾ ನಡೆಸಿದ ಭೀಕರ ವೈಮಾನಿಕ ದಾಳಿಯಿಂದಾಗಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಅಲ್ ವಾಜಿಯಾ ಜಿಲ್ಲೆಯ ಗಿಜಿಗುಡುವ ಅಲ್ ಹಧಾರ ಮಾರುಕಟ್ಟೆಯ ಮೇಲೆಯೇ ಸೌದಿ ಸೇನೆಯ ಯುದ್ಧ ವಿಮಾನಗಳು ನೇರ ಏರ್ ಸ್ಟ್ರೈಕ್ ನಡೆಸಿದ್ದು, ಮಾರುಕಟ್ಟೆಯಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಅಮಾಯಕರ ಪ್ರಾಣ ಪಕ್ಷಿ ಹಾರಿಹೋಗಿದೆ.
ದಾಳಿಯ ತೀವ್ರತೆಗೆ ಮಾರುಕಟ್ಟೆ ಪ್ರದೇಶ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಶವಗಳ ರಾಶಿಯೇ ಬಿದ್ದಂತಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಭೀಕರ ಪರಿಸ್ಥಿತಿಯನ್ನು ಬಣ್ಣಿಸಿದ್ದಾರೆ.
ಈ ಅನಿರೀಕ್ಷಿತ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.
ಕೃತ್ಯದ ಬಳಿಕ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.


