ತುರುವೇಕೆರೆ: ಸರ್ಕಾರದ ಯೋಜನೆಗಳು ಸಾಕಷ್ಟಿದ್ದರೂ ಸಹ ಲಯನ್ಸ್ ಕ್ಲಬ್ ಜನರ ಬದುಕಿಗೆ ನೆರವಾಗುವಂತಹ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ತಿಳಿಸಿದರು.
ಪಟ್ಟಣದ ವಿರಕ್ತ ಮಠ ಸಮುದಾಯ ಭವನದಲ್ಲಿ ಮಹಿಳಾ ಸಬಲೀಕರಣದ ಆಶಯದಲ್ಲಿ ಲಯನ್ಸ್ ಕ್ಲಬ್ ಆಯೋಜಿಸಿದ್ದ 120 ಮಂದಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 38 ವರ್ಷಗಳಿಂದ ತುರುವೇಕೆರೆ ಲಯನ್ಸ್ ಸಂಸ್ಥೆ ಆರೋಗ್ಯ ಶಿಬಿರ, ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ, ಪರಿಸರ ಸಂರಕ್ಷಣೆ, ಶೈಕ್ಷಣಿಕ, ಕ್ರೀಡಾ ಪ್ರೋತ್ಸಾಹ, ವಿಶೇಷಚೇತನರಿಗೆ, ಅಶಕ್ತರಿಗೆ ನೆರವು, ವೃದ್ಧಾಶ್ರಮಗಳಲ್ಲಿನ ವೃದ್ಧರಿಗೆ ಸಹಾತೆ ಸೇರಿದಂತೆ ನೂರಾರು ಕಾರ್ಯಕ್ರಮಗಳ ಮೂಲಕ ಜನರ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದೆ. ಹಾಲಿ ಅಧ್ಯಕ್ಷ ಸುನಿಲ್ ಬಾಬು ಅವರು ದೊಡ್ಡ ಆಶಯದೊಂದಿಗೆ ಮಹಿಳಾ ಸಬಲೀಕರಣ ವಿಚಾರದಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿ ಸ್ವಾವಲಂಬಿ ಬದುಕಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ 120 ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ಕೊಡಿಸಿ, ಆ ಮಹಿಳೆಯರಿಗೆ ಹಲವು ಲಯನ್ಸ್ ಸಂಸ್ಥೆಗಳೊಡಗೂಡಿ ಉಚಿತವಾಗಿ ಹೊಲಿಗೆ ಯಂತ್ರವನ್ನೂ ನೀಡಿ ಅವರ ಜೀವನಕ್ಕೆ ನೆರವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಮಹಿಳಾ ಸಬಲೀಕರಣದ ವಿಚಾರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಹ ದೊಡ್ಡ ಯೋಜನೆಯನ್ನು ರೂಪಿಸಿದ್ದಾರೆ. ಶಾಸನ ಸಭೆಗೆ ಪುರುಷರಷ್ಟೇ ಅಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಶಾಸಕರಾಗಿ ಆಯ್ಕೆಯಾಗಿ ಬರಬೇಕು ಎಂಬ ಆಶಯದೊಂದಿಗೆ ಮಹಿಳಾ ಮೀಸಲಾತಿ ನೀಡಲು ಮುಂದಾಗಿದ್ದಾರೆ. 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ 82 ಮಹಿಳಾ ಶಾಸಕರು ಆಯ್ಕೆಯಾಗಬೇಕು ಎಂಬ ಯೋಚನೆ ಪ್ರಧಾನಿಗಳದ್ದಾಗಿದೆ. ಈ ನಿಟ್ಟಿನಲ್ಲಿ 2028 ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಶಾಸಕರು ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸುವ ಸುವರ್ಣಾವಕಾಶವನ್ನು ಪ್ರಧಾನಿಗಳು ಕಲ್ಪಿಸಲಿದ್ದು, ಅವರಿಗೆ ಎಲ್ಲಾ ಮಹಿಳೆಯರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ವಿರಕ್ತ ಮಠದ ಡಾ.ಶ್ರೀ ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಆರ್ಶೀವಚನ ನೀಡಿದರು. ಚಿತ್ರನಟ ಸುವಿಶ್ ಚಂದ್ರ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಸುನಿಲ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಹೊಲಿಗೆ ತರಬೇತಿ ಪಡೆದ 120 ಮಂದಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ, ಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ.ಈಶ್ವರನ್, ಕಲ್ಪತರು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಚೌದ್ರಿ ನಾಗೇಶ್, ಜಯಕರ್ನಾಟಕ ರಾಜ್ಯಾಧ್ಯಕ್ಷ ಡಾ.ಜಗದೀಶ್, ತುಮುಲ್ ನಿರ್ದೇಶಕ ಮಹಲಿಂಗಯ್ಯ, ಲಯನ್ಸ್ ವಿಡಿಜಿ ರಾಜನ್, ಡಿಸಿಎಸ್ ಸತ್ಯನಾರಾಯಣ್, ಕೋಆರ್ಡಿನೇಟರ್ ಗುರುಪ್ರಸಾದ್, ಜಿಎಲ್‌ಟಿ ಕೋಆರ್ಡಿನೇಟರ್ ಎಸ್.ಎಲ್.ವೆಂಕಟೇಶ್, ಪ್ರಾಂತ್ಯಾಧ್ಯಕ್ಷ ಮಹೇಶ್, ಇನ್ನರ್ ವೀಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾಚೌದ್ರಿ, ವಲಯಾಧ್ಯಕ್ಷ ಲೋಕೇಶ್, ಸ್ವಾಗತ ಸಮಿತಿ ಅಧ್ಯಕ್ಷ ಗಂಗಾಧರ ದೇವರಮನೆ, ಲಯನ್ಸ್ ಟ್ರಸ್ಟ್ ಮಾಜಿ ಅಧ್ಯಕ್ಷ ಧನಪಾಲ್, ಲಯನ್ಸ್ ಕಾರ್ಯದರ್ಶಿ ಎಸ್.ವಿ.ರವಿ, ಖಜಾಂಚಿ ಆನಂದ್, ರುದ್ರಯ್ಯ ಹಿರೇಮಠ, ಸುಮಾಮಲ್ಲಿಕ್, ಮಲ್ಲಿಕಾರ್ಜುನ್ ದುಂಡ ಹಾಗೂ ಮಹಿಳಾ ಫಲಾನುಭವಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


