ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಅಪ್ಪಳಿಸಿದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಹಾಪುರ ತಾಲೂಕಿನ ಇಬ್ರಾಹಿಂ ಡಿಬಿಎಲ್ ಕ್ಯಾಂಪ್ ಸಮೀಪ ಹಾದುಹೋಗುವ ಚೆನ್ನೈ-ಸೂರತ್ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ರಾತ್ರಿ ಸುಮಾರು 11:30ರ ವೇಳೆಗೆ ಈ ದುರಂತ ನಡೆದಿದೆ.
ನಿರ್ಮಾಣ ಹಂತದಲ್ಲಿದ್ದ ಈ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತಡೆಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮೃತರ ವಿವರ:
ದುರ್ಘಟನೆಯಲ್ಲಿ ಮೃತಪಟ್ಟವರನ್ನು ಗುರುರಾಜ್ ಚವ್ಹಾಣ್ (35), ರೆಡ್ಡಿ ರಾಠೋಡ್ (33), ಗೋವಿಂದ ಚವ್ಹಾಣ್ (28) ಹಾಗೂ ಕುಮಾರ ರಾಠೋಡ್ (26) ಎಂದು ಗುರುತಿಸಲಾಗಿದೆ.
ಇವರ ಪೈಕಿ ಮೂವರು ಮಲ್ಹಾರ್ ತಾಂಡಾದವರಾಗಿದ್ದು, ಮತ್ತೋರ್ವ ಲಿಂಗೇರಿ ತಾಂಡಾದ ನಿವಾಸಿ ಎಂದು ತಿಳಿದುಬಂದಿದೆ. ಯುವಕರೆಲ್ಲರೂ ಜೇವರ್ಗಿಯಿಂದ ಕಾರಿನಲ್ಲಿ ಯಾದಗಿರಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.


