ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ 70 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಎಎಸ್‌ಐ ಮತ್ತು ಪಿಎಸ್‌ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಿ ರಿಪೋರ್ಟ್ ಹಾಕಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪಿಎಸ್‌ಐ ಶರಣಪ್ಪ ಮತ್ತು ಎಎಸ್‌ಐ ವೆಂಕಟೇಶಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇವರು ಜಮೀನು ವಿವಾದ ಸಂಬಂಧ ಗಲಾಟೆ ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಹಾಕಲು 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಇಂದು ಕನ್ನಡ ಭವನದ ಸಮೀಪ ಲಂಚ ಪಡೆಯುತ್ತಿದ್ದ ವೆಂಕಟೇಶಪ್ಪ ಮತ್ತು ಚಿಕ್ಕಬಳ್ಳಾಪುರ ವರವಲಯದ ಚಿತ್ರಾವತಿಯ ಸಮೀಪ ಶರಣಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೊಳಪಡಿಸಿ ಆರೋಪಿಗಳನ್ನು ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪಿಎಸ್‌ಐ ಶರಣಪ್ಪ ಸೂಚನೆ ಮೇರೆಗೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. 70 ಸಾವಿರ ರೂ. ಲಂಚ ಪಡೆಯುತ್ತಿದ್ದ ವೆಂಕಟೇಶಪ್ಪ ಬಲೆಗೆ ಬಿದ್ದಿದ್ದಾರೆ.
ಮೊಟ್ಲೂರಿನ ರಘು ಅವರಿಂದ ಲಂಚ ಪಡೆಯುವಾಗ ಎಎಸ್‌ಐ ವೆಂಕಟೇಶಪ್ಪ ಬಲೆಗೆ ಬಿದ್ದಿದ್ದಾರೆ. ನಂತರ ಪಿಎಸ್‌ಐ ಶರಣಪ್ಪ ಅವರನ್ನು ಬಂಧಿಸಲಾಗಿದೆ.
ಪಿಎಸ್‌ಐ ಮತ್ತು ಎಎಸ್‌ಐ ಅವರನ್ನು ಪ್ರತ್ಯೇಕ ವಿಚಾರಣೆಗೊಳಪಡಿಸಲಾಗಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.




