ತುರುವೇಕೆರೆ: -ನವರಾತ್ರಿ, ದಸರಾ ಬಂತೆಂದರೆ ಇಡೀ ನಾಡೇ ಸಂಭ್ರಮದಿಂದ ನಲಿದಾಡುತ್ತದೆ. ನಾಡಿನ ಪ್ರತಿ ಮನೆಗಳಲ್ಲಿ ಪೂಜೆ ಪುನಸ್ಕಾರಗಳು ಜೋರು, ಬೊಂಬೆಗಳ ವೈಭವದೊಂದಿಗೆ ಹಬ್ಬದ ಸಂಭ್ರಮದ ವಾತಾವರಣವಿರುತ್ತದೆ.ತುರುವೇಕೆರೆಯ ಪ್ರತಿ ಮನೆಯಲ್ಲೂ ಬೊಂಬೆಯಾಟ ಜೋರಾಗಿಯೇ ಇದೆ. ಪಟ್ಟಣದ ಎಸ್.ಬಿ.ಐ ರಸ್ತೆಯಲ್ಲಿರುವ ಗಾಯತ್ರಿಶಶಿಕುಮಾರ್ ಅವರ ಮನೆಯಲ್ಲಿ ಬೊಂಬೆಗಳ ಆಟ ಬಹು ಜೋರಾಗಿಯೇ ಇದೆ. ಮನೆಯ ಮುಖ್ಯ ಅಂಗಳದಲ್ಲಿ ಬೊಂಬೆಗಳಿಂದ ತುಂಬಿ ತುಳುಕುತ್ತಿದೆ. ಯಾವ ಬೊಂಬೆಯನ್ನು ಕಣ್ತುಂಬಿಕೊಳ್ಳುವುದು, ಯಾವುದು ಎಷ್ಟು ಚಂದವಿದೆ ಎಂದು ಹೇಳುವುದೇ ಕಷ್ಟ ಎಂಬಂತಿದೆ ಸಾಲು ಸಾಲು ಬೊಂಬೆಗಳು.
ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿ ಪ್ರಯುಕ್ತ ಗಾಯತ್ರಿ ಶಶಿಕುಮಾರ್ ಮನೆಯಲ್ಲಿ ಬೊಂಬೆಗಳನ್ನಿಡಲಾಗಿದೆ. ವಿಶೇಷವಾಗಿ ಸಿದ್ಧಪಡಿಸಿರುವ ಸಾಲು ಸಾಲು ಮೆಟ್ಟಿಲುಗಳ ಮೇಲೆ ಬೊಂಬೆಗಳು ರಾರಾಜಿಸುತ್ತಿವೆ. ವರ್ಣರಂಜಿತವಾಗಿ ಅಲಂಕೃತಗೊಂಡಿರುವ ದಸರಾ ಪಟ್ಟದ ಬೊಂಬೆಗಳೊಂದಿಗೆ ಶೃಂಗೇರಿಯ ಶಾರದಾ ಮಾತೆ, ಜಗದ್ಗುರುಗಳ ಪರಂಪರೆ, ದುರ್ಗಾಮಾತೆ, ವಿಷ್ಣುವಿನ ದಶಾವತರ, ಸಪ್ತ ಋಷಿಗಳು, ದಸರಾ ಜಂಬೂಸವಾರಿ, ಅಂಬಾರಿಯ ಮೆರವಣಿಗೆ, ಅಷ್ಟಲಕ್ಷ್ಮೀಯರು, ಕೈಲಾಸ ಪರ್ವತದಲ್ಲಿ ಶಿವಪಾರ್ವತಿಯರು, ನವದುರ್ಗೆಯರು, ಸೀತಾಮಾತೆ, ರಾಮ ಆಂಜನೇಯ, ಭರತ, ಶತ್ರುಘ್ನರು, ಮಧುರೈ ಮೀನಾಕ್ಷಿ ಕಲ್ಯಾಣ, ಪಳನಿ ಸುಬ್ರಮಣ್ಯ, ಕೇರಳ ಅನಂತಪದ್ಮನಾಭ, ಯಕ್ಷಗಾನ, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮಹಿಷಾಸುರ, ಗ್ರಾಮೀಣ ಸೊಗಡಿನ ಪುಟ್ಟ ಹಳ್ಳಿ, ಗತಕಾಲದ ಪಾತ್ರೆಗಳು, ವಕೀಲರು, ಪೊಲೀಸರು, ವೈದ್ಯರು, ವ್ಯಾಪಾರಸ್ಥರು, ಟೀ ಸ್ಟಾಲ್ ಸೇರಿದಂತೆ ಸಾವಿರಾರು ಬೊಂಬೆಗಳು ಕಣ್ಮನ ಸೆಳೆಯುತ್ತದೆ.
ನವರಾತ್ರಿಯ ಪ್ರತಿ ದಿನ ಸಂಜೆ ಬೊಂಬೆಗಳಿಗೆ ಆರತಿ ಮಾಡಿ, ಮುತ್ತೈದೆಯರಿಗೆ ಅರಿಶಿನ ಕುಂಕುಮ ಬಾಗಿನ ನೀಡುವುದು ಹಾಗೂ ಬೊಂಬೆ ನೋಡಲು ಮನೆಮನೆಗೆ ಬರುವ ಪುಟಾಣಿಗಳಿಗೆ ಸಿಹಿ ನೀಡುವುದು ಮೊದಲಿನಿಂದಲೂ ನಡೆದು ಬಂದ ಹಿಂದೂ ಧಾರ್ಮಿಕ ಸಂಪ್ರದಾಯ ಮತ್ತು ಪ್ರತೀತಿಯಾಗಿದೆ.ಒಟ್ಟಾರೆ ಪಟ್ಟಣದ ಗಾಯತ್ರಿ ಶಶಿಕುಮಾರ್ ಮನೆಯಲ್ಲಿ ನವರಾತ್ರಿ ಸಂಭ್ರಮ ಜೋರಾಗಿದ್ದು, ಇದು ನವರಾತ್ರಿ ದಸರಾ ಬೊಂಬೆಯಾಟವಯ್ಯ ಎಂದು ಬೊಂಬೆ ನೋಡಲು ಬಂದವರೆಲ್ಲಾ ಉದ್ಘರಿಸುತ್ತಿದ್ದಾರೆ.
ವರದಿ: ಗಿರೀಶ್ ಕೆ ಭಟ್