ಬೆಂಗಳೂರು: ರಾಜ್ಯವು ಪ್ರಸ್ತುತ ಸಾಲಿನಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ ಜನತೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸದನಕ್ಕೆ ವಿವರಿಸಿದ ಅವರು, ನಮ್ಮ ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ.
ರಾಜ್ಯದ 758 ಗ್ರಾಮಗಳಿಗೆ 149 ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 714 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ. ನಗರ ಪ್ರದೇಶದ 18 ಸ್ಥಳೀಯ ಸಂಸ್ಥೆಗಳ 114 ವಾರ್ಡ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ.
ಇಲ್ಲಿಯೂ 18 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಪರಿಸ್ಥಿತಿ ತೀವ್ರವಾದರೆ ಮುಂದಿನ ಬೇಸಿಗೆಯಲ್ಲಿ 2,059 ಗ್ರಾಮ ಪಂಚಾಯತ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಹುದು ಎಂದು ಅಂದಾಜು ಮಾಡಿ ಅದಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ 152 ಲಕ್ಷ ಟನ್‌ಗಳಷ್ಟು ಮೇವಿನ ಸಂಗ್ರಹವಿದೆ. ಇದು 33 ವಾರಗಳಿಗೆ ಸಾಕಾಗುತ್ತದೆ. 44 ತಾಲೂಕುಗಳಲ್ಲಿ 25 ವಾರಗಳಿಗೆ ಹಾಗೂ 17 ತಾಲೂಕುಗಳಲ್ಲಿ 20 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ.
ಇದರ ನಡುವೆ ನೀರಿನ ಆಸರೆ ಹೊಂದಿರುವ ರೈತರಿಗೆ ಮೇವಿನ ಬೀಜದ ಕಿಟ್‌ಗಳನ್ನು ನೀಡಲು ₹25 ಕೋಟಿ ಬಿಡುಗಡೆ ಮಾಡಿದ್ದೇವೆ. ಕೆಎಂಎಫ್ ಕಡೆಯಿಂದಲೂ ಕಿಟ್‌ಗಳನ್ನು ನೀಡುತ್ತಿದ್ದೇವೆ. ಮೇವು ಬೆಳೆದ ರೈತರು ಅದನ್ನು ಜೋಪಾನ ಮಾಡಬೇಕೆಂದು ವಿನಂತಿಸಿದ್ದೇನೆ ಎಂದರು.
ನಮ್ಮ ಸರ್ಕಾರ ಈಗಾಗಲೇ ರಾಜ್ಯದ 31 ಜಿಲ್ಲೆಗಳಿಗೆ ₹117 ಕೋಟಿ ಬಿಡುಗಡೆ ಮಾಡಿದೆ. ಇದರ ಜೊತೆಗೆ ಪ್ರತೀ ಗ್ರಾಮೀಣ ಕ್ಷೇತ್ರಕ್ಕೆ ತಲಾ ₹1 ಕೋಟಿಯಂತೆ ₹189 ಕೋಟಿ ಬಿಡುಗಡೆ ಮಾಡಿದೆ.
ಒಟ್ಟಾರೆ ₹306 ಕೋಟಿಗಳನ್ನು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬಿಡುಗಡೆ ಮಾಡಿದ್ದೇವೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮಲ್ಲಿ ಹಣದ ಕೊರತೆಯಿಲ್ಲ ಎಂದು ತಿಳಿಸಿದ್ದಾರೆ.


