ಮಂಡ್ಯ : ನಗರದ ಮಸೀದಿ ಹೊರಗೆ ಹಲವು ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ ವೃದ್ಧೆ ಮೃತಪಟ್ಟ ಬಳಿಕ, ಆಕೆಯ ಮನೆಯಲ್ಲಿ ಚೀಲಗಳಲ್ಲಿ ತುಂಬಿದ್ದ ನಗದು ಮತ್ತು ನಾಣ್ಯಗಳು ಪತ್ತೆಯಾಗಿದ್ದು, ಒಟ್ಟು ಮೊತ್ತ ₹30 ಲಕ್ಷಕ್ಕೂ ಅಧಿಕ ಎಂದು ತಿಳಿದುಬಂದಿದೆ.
ಮಂಡ್ಯ ನಗರದ ಗುಟ್ಟಲು ಬಡಾವಣೆಯ ನಿವಾಸಿಯಾಗಿದ್ದ ಹೂರ್ ಎಂಬ ವೃದ್ಧೆ ಹಲವು ವರ್ಷಗಳಿಂದ ಸ್ಥಳೀಯ ಮಸೀದಿ ಹೊರಗೆ ಭಿಕ್ಷೆ ಬೇಡುತ್ತಿದ್ದರು.
ತಮ್ಮ ಕುಟುಂಬದವರು ತಮ್ಮನ್ನು ನೋಡಿಕೊಳ್ಳುತ್ತಿಲ್ಲ, ಜೀವನ ನಿರ್ವಹಣೆಗೆ ಭಿಕ್ಷೆ ಬೇಡುವುದೇ ಅನಿವಾರ್ಯವಾಗಿದೆ ಎಂದು ಅವರು ಹೇಳುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಹೂರ್ ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಅಂತ್ಯಕ್ರಿಯೆಯ ನಂತರ ಕೆಲವರು ಅವರ ಮನೆಗೆ ತೆರಳಿದಾಗ, ಅಲ್ಲಿ ಚೀಲಗಳಲ್ಲಿ ತುಂಬಿದ್ದ ಅಪಾರ ಪ್ರಮಾಣದ ನಗದು ಮತ್ತು ನಾಣ್ಯಗಳು ಪತ್ತೆಯಾಗಿವೆ.
ಸ್ಥಳೀಯ ನಿವಾಸಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಣದ ಪ್ರಮಾಣ ಕಂಡು ತಾವು ಆಘಾತಕ್ಕೊಳಗಾದೆವು ಎಂದು ತಿಳಿಸಿದ್ದಾರೆ. ಹಣವನ್ನು ಎಣಿಸಿದಾಗ ₹30 ಲಕ್ಷಕ್ಕೂ ಅಧಿಕವಾಗಿದ್ದು, ₹30ರಿಂದ ₹40 ಲಕ್ಷದವರೆಗೆ ಇರಬಹುದು ಎಂದು ಅವರು ಹೇಳಿದ್ದಾರೆ.


