ನಿಡಗುಂದಿ: ನಿಡಗುಂದಿ ಕೇನಾಲ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ಕಾಸಿನಕುಂಟಿ ಗ್ರಾಮದ ಮುದಿಯಪ್ಪ ಛಲವಾದಿ (40) ಎಂಬುವವರು ಕಾಲು ಜಾರಿ ನೀರಿಗೆ ಬಿದ್ದಿದ್ದು, ನಾಪತ್ತೆಯಾಗಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಮುದಿಯಪ್ಪ ಅವರು ತಲೆಗೆ ಕರಿ ಬಣ್ಣ ಹಚ್ಚಿಕೊಂಡು ಸ್ನಾನ ಮಾಡಲು ಕೇನಾಲ್‌ಗೆ ತೆರಳಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ನೀರಿನಲ್ಲಿ ಬಿದ್ದ ಬಳಿಕ ಮೇಲೆ ಬರಲು ಪ್ರಯತ್ನಿಸಿದರೂ ಸಾಧ್ಯವಾಗದೆ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುದಿಯಪ್ಪ ಅವರ ಬಟ್ಟೆ ಹಾಗೂ ಚಪ್ಪಲಿಗಳು ಕೇನಾಲ್ ದಡದಲ್ಲೇ ಪತ್ತೆಯಾಗಿವೆ.
ಮುದಿಯಪ್ಪ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಮುದಿಯಪ್ಪ ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವರದಿ: ಅಲಿ ಮಕಾನದಾರ


