ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ಬಡ ಮತ್ತು ಸಾಮಾನ್ಯ ರೋಗಿಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಆರೋಗ್ಯ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಗೊಂದಲಗಳು ಹಾಗೂ ಸಿಬ್ಬಂದಿಗಳ ನಡೆಗಳ ಕುರಿತಾದ ದೂರುಗಳನ್ನು ಆಲಿಸಲು ಆರೋಗ್ಯ ಸಚಿವರ ಕಚೇರಿಯಿಂದಲೇ ನೇರವಾಗಿ ನಿಯಂತ್ರಿಸಲ್ಪಡುವ 24×7 ಉಚಿತ ಸಹಾಯವಾಣಿ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.
'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳಿಗೆ ಅನೇಕ ಅನುಮಾನಗಳಿರುತ್ತವೆ, ಆದರೆ ಹಲವು ಸಂದರ್ಭಗಳಲ್ಲಿ ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಇದನ್ನು ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಹೊಸದಾಗಿ ಆರಂಭಿಸಲಾಗುವ ಸಹಾಯವಾಣಿ ಸಂಖ್ಯೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿ ವಿಳಂಬ ಮಾಡುವುದು ಅಥವಾ ರೋಗಿಗಳಿಂದ ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇಡುವ ಆಸ್ಪತ್ರೆಗಳ ವಿರುದ್ಧ ಈ ಹೆಲ್ಪ್‌ಲೈನ್ ಮುಖಾಂತರ ಸಾರ್ವಜನಿಕರು ಇನ್ಮುಂದೆ ನೇರವಾಗಿ ದೂರು ನೀಡಬಹುದಾಗಿದೆ.
ಫಲಾನುಭವಿಗಳಿಂದ ಯಾವುದೇ ಕಾರಣಕ್ಕೂ ಹಣ ವಸೂಲಿ ಮಾಡಬಾರದು ಮತ್ತು ಆಸ್ಪತ್ರೆಗಳೊಂದಿಗಿನ ವಿವಾದಗಳನ್ನು ಬಗೆಹರಿಸಲು 'ಆರೋಗ್ಯ ಮಿತ್ರ' ಸಿಬ್ಬಂದಿಯೇ ಜವಾಬ್ದಾರರಾಗಿರುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಉಚಿತ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಜಾಹೀರಾತು ಫಲಕಗಳನ್ನು ಪ್ರದರ್ಶಿಸಲು ಸೂಚಿಸಲಾಗಿದ್ದು, ಮುಂಬರುವ ವಾರಗಳಲ್ಲೇ ಈ ಹೊಸ ವ್ಯವಸ್ಥೆಯು ರಾಜ್ಯಾದ್ಯಂತ ಅನುಷ್ಠಾನಕ್ಕೆ ಬರಲಿದೆ.
ಹೃದಯ ಶಸ್ತ್ರಚಿಕಿತ್ಸೆಯ ವೆಚ್ಚದ ಮೇಲೆ ಮಿತಿ ಹೇರುವ ಕುರಿತು ಮಾತನಾಡಿದ ಸಚಿವರು, ಆಯುಷ್ಮಾನ್ ಯೋಜನೆಯು ಶುಲ್ಕಗಳ ಮೇಲೆ ಈಗಾಗಲೇ ಮಿತಿಯನ್ನು ಹೊಂದಿದ್ದು, ಆಸ್ಪತ್ರೆಗಳು ಅವುಗಳನ್ನು ಮೀರುವಂತಿಲ್ಲ ಎಂದು ಎಚ್ಚರಿಸಿದ್ದಾರೆ.
ಅಲ್ಲದೆ, ಸಂಜೀವಿನಿ-ಪುನೀತ್ ರಾಜ್‌ಕುಮಾರ್ ಯೋಜನೆಯಂತಹ ಇತರ ಯೋಜನೆಗಳ ಅಡಿಯಲ್ಲಿ ಇಸಿಜಿ, ಚುಚ್ಚುಮದ್ದು, ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲ್ಯಾಸ್ಟಿಯನ್ನು ಅನೇಕ ಸಂದರ್ಭಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ.
ಉಚಿತ ಆಂಜಿಯೋಗ್ರಾಮ್ ಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರವು ಇತರ ಮಾರ್ಗಗಳನ್ನು ಪರಿಶೀಲಿಸುತ್ತಿದ್ದು, ಇಲಾಖೆಯ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಕೆಲವು ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಏಕೀಕರಿಸುವ ಯೋಚನೆಯೂ ಇದೆ ಎಂದು ಯುಟಿ ಖಾದರ್ ಮಾಹಿತಿ ನೀಡಿದ್ದಾರೆ.


