ಬೆಳಗಾವಿ: ಜಿಲ್ಲೆ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ನುಗ್ಗಾನಟ್ಟಿ ಗ್ರಾಮದ ರೌಡಿಶೀಟರ್ ನೀಲಕಂಠ ಮುದಕಪ್ಪ ಮನವಾಡಕರ (26 ವರ್ಷ) ಎಂಬಾತನನ್ನು 6 ತಿಂಗಳ ಕಾಲ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
1. ಮಾಡಮಗೇರಿ ಗ್ರಾಮದ ಒಬ್ಬ ಮುಗ್ಧ ದಲಿತ ಮಹಿಳೆಗೆ ಹೆದರಿಸಿ ಜಮೀನು ಕಬಳಿಸಲು ಯತ್ನ.
2. ನುಗ್ಗಾನಟ್ಟಿ ಗ್ರಾಮದ ಅಮಾಯಕ ಯುವಕ ರಾಜು ಮುದ್ದನ್ನವರನನ್ನು ರೌಡಿ ಸಹಚರರೊಂದಿಗೆ ಸೇರಿ ಕೊಲೆ ಮಾಡಿದ ಪ್ರಕರಣ.
3. ಯರಝರ್ವಿ ಗ್ರಾಮದ ನಡು ರಸ್ತೆಯಲ್ಲಿ ಕುಟರನಟ್ಟಿ ಗ್ರಾಮದ ವ್ಯಕ್ತಿಯ ಮೇಲೆ ಹಲ್ಲೆ.
ಈತನ ದೌರ್ಜನ್ಯದಿಂದ ನುಗ್ಗಾನಟ್ಟಿ, ಯರಗಟ್ಟಿ, ಬೂದಿಗೊಪ್ಪ, ಯರಝರ್ವಿ, ಕುಟರನಟ್ಟಿ, ಮಾಡಮಗೇರಿ, ಗೋಕಾಕ, ಖನಗಾಂವ, ಬೆಣಚಿನಮರಡಿ ಮತ್ತು ಗುಧಟ್ಟಿ ಗ್ರಾಮಸ್ಥರು ನೆಮ್ಮದಿಯಿಂದ ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈತನ ಉಪಟಳ, ಸಾಮಾಜಿಕ ಜಾಲತಾಣದಲ್ಲಿ ಫೋಟೋ-ವಿಡಿಯೋ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ.
ಸಾಕ್ಷಿದಾರರಿಗೂ ಬೆದರಿಕೆ ಹಾಕುತ್ತಿದ್ದ ಕಾರಣ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿ ಆಧರಿಸಿ, ಜಿಲ್ಲಾಧಿಕಾರಿಗಳು ಈತನನ್ನು 6 ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿದ್ದಾರೆ. ಮುರಗೋಡ ಪೊಲೀಸರು ಆರೋಪಿಯನ್ನು ಧಾರವಾಡ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಜಾರಿಗೊಳಿಸಿದ್ದಾರೆ.

