ಹಾವೇರಿ : ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಕಷ್ಟಪಟ್ಟು ಬೆಳೆಸಿದ ಮಕ್ಕಳನ್ನು ಅಪಹರಿಸುವ (Kidnap) ಜಾಲ ಸಕ್ರಿಯವಾಗಿರುವ ವದಂತಿ ಹಾಗೂ ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲೂ ಇಂತಹುದೇ ಒಂದು ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ವೈಭವಲಕ್ಷ್ಮಿ ಬಡಾವಣೆ ಹಾಗೂ ಛತ್ರ ರಸ್ತೆ ಸಮೀಪ ಅಪರಿಚಿತ ವ್ಯಕ್ತಿಗಳಿಬ್ಬರು ಸಣ್ಣ ಮಕ್ಕಳಿಗೆ ಚಾಕೊಲೇಟ್ ಮತ್ತು ಚಿಪ್ಸ್ ನೀಡಿ ಆಮಿಷ ಒಡ್ಡಲು ಯತ್ನಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಹಾಗೂ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಬಳಿ ತೆರಳಿದ ಇಬ್ಬರು ಅಪರಿಚಿತರು, ಅವರನ್ನು ನಯವಾಗಿ ಮಾತಿಗೆಳೆದು ತಮ್ಮ ಬಳಿಯಿದ್ದ ಚಾಕೊಲೇಟ್ ಹಾಗೂ ಚಿಪ್ಸ್ ಪೊಟ್ಟಣಗಳನ್ನು ನೀಡಲು ಮುಂದಾಗಿದ್ದಾರೆ.
ಅಪರಿಚಿತರ ಈ ಅನುಮಾನಾಸ್ಪದ ವರ್ತನೆಯಿಂದ ತೀವ್ರ ಹೆದರಿದ ಜಾಣ ಮಕ್ಕಳು, ತಕ್ಷಣವೇ ಅಲ್ಲಿಂದ ಓಡಿ ತಮ್ಮ ಮನೆಗಳನ್ನು ಸೇರಿಕೊಂಡಿದ್ದಾರೆ.
ಈ ಇಡೀ ಘಟನೆಯ ದೃಶ್ಯಗಳು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಈ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಘಟನೆ ಬೆನ್ನಲ್ಲೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳ ಮೇಲೆ ಸದಾ ಕಣ್ಣಿಟ್ಟಿರಬೇಕು ಹಾಗೂ ಅಪರಿಚಿತರೊಂದಿಗೆ ಮಾತನಾಡದಂತೆ ತಿಳಿಹೇಳಬೇಕು ಎಂದು ಮನವಿ ಮಾಡಲಾಗಿದೆ.
ಯಾರೇ ಆಗಲಿ ಅಪರಿಚಿತರು ನೀಡುವ ಯಾವುದೇ ಆಹಾರ, ಚಾಕೊಲೇಟ್ ಅಥವಾ ಉಡುಗೊರೆಗಳನ್ನು ಖಂಡಿತವಾಗಿಯೂ ಸ್ವೀಕರಿಸದಂತೆ ಮಕ್ಕಳಿಗೆ ಸೂಕ್ತ ಎಚ್ಚರಿಕೆ ನೀಡಲು ತಿಳಿಸಲಾಗಿದೆ.
ಇನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತಕ್ಷಣವೇ ಸೂಕ್ತ ತನಿಖೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.


