ವಿಜಯನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆ ಪ್ರಜಾಸೇವೆ ಇಲಾಖೆ ಉದ್ಘಾಟನೆಗೊಂಡಿದ್ದು, ಇದೇ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಹಲವಾರು ಮಹತ್ವದ ಘೋಷಣೆ ಮಾಡಿದ್ದಾರೆ.
ವಿಜಯನಗರದ ಕೂಡ್ಲಗಿಯಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಅಕ್ಷರ ಸೇವೆಯೇ ಪರಮಾತ್ಮನ ಸೇವೆ.
ಸಮಾಜವನ್ನು ತಿದ್ದಿ ತೀಡುವ ಶಿಕ್ಷಕರಿಗೆ ಅರ್ಹ ಗೌರವ ಸಿಗಬೇಕು. ವೈದ್ಯರ ಹೆಸರಿನ ಮುಂದೆ 'Dr' ಎಂದು ಬಳಸುವಂತೆ, ಇನ್ಮುಂದೆ ಪ್ರತಿಯೊಬ್ಬ ಶಿಕ್ಷಕರ ಹೆಸರಿನ ಮುಂದೆಯೂ ಗೌರವಾರ್ಥವಾಗಿ 'Tr' ಎಂದು ಸಂಬೋಧಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.
ಬಡ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಶಕ್ತಿ ತುಂಬಲು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7ರಷ್ಟು ಆಂತರಿಕ ಮೀಸಲಾತಿ ನೀಡಲು ಸಚಿವ ಸಂಪುಟಸಭೆಯಲ್ಲಿ ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಇದರ ಜಾರಿಯ ರೂಪುರೇಷೆ ಪ್ರಕಟಿಸುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಪ್ರಜಾಸೇವೆ ಅಭಿಯಾನದ ಮೂಲಕ ಮನೆ ಬಾಗಿಲಿಗೆ ಸರ್ಕಾಅರ ಬರಲಿದೆ. 'ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ' ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾಗಿರುವ ಪ್ರಜಾಸೇವಾ ಅಭಿಯಾನದಿಂದ ಸಾಕಷ್ಟು ಅನುಕೂಲಗಳಾಗಲಿವೆ ಎಣ್ದರು.
ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಜಿಲ್ಲಾ ಮಂತ್ರಿಗಳು, ಶಾಸಕರು ಮತ್ತು ಅಧಿಕಾರಿಗಳು ಗ್ರಾಮ ಪಂಚಾಯಿತಿ, ಹೋಬಳಿ ಹಾಗೂ ತಾಲೂಕು ಮಟ್ಟಕ್ಕೆ ಖುದ್ದು ತೆರಳಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ವಿಧಾನಸೌಧಕ್ಕಾಗಲಿ, ಜಿಲ್ಲಾಧಿಕಾರಿ ಕಚೇರಿಗಳಿಗಾಗಲಿ ಅಲೆಯಲು ಸಾಧ್ಯವಾಗದ ದುರ್ಬಲ ವರ್ಗದವರಿಗೆ ಸ್ಥಳದಲ್ಲೇ ನ್ಯಾಯ ಒದಗಿಸುವುದು ಇದರ ಮೂಲ ಉದ್ದೇಶ. ಈಗಾಗಲೇ 50 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಅರ್ಜಿ ಸ್ವೀಕಾರಕ್ಕೆ ಸೀಮಿತವಾಗದೆ ಪರಿಹಾರ ಸಿಗುವವರೆಗೂ ಸರ್ಕಾರ ಬೆನ್ನಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.


