16 ವರ್ಷದ ಯುವಕನೊಬ್ಬನ ಕಣ್ಣಿನ ಮೇಲ್ಭಾಗದಲ್ಲಿ ಹಲ್ಲು ಬೆಳೆದಿರುವ ಅಪರೂಪದ (Viral News) ಪ್ರಕರಣ ವೈದ್ಯಕೀಯ ಲೋಕದ ಗಮನ ಸೆಳೆದಿದೆ. ಎಡಗಣ್ಣಿನ ಮೇಲ್ಭಾಗದಲ್ಲಿ ನೋವಿಲ್ಲದ ಸಣ್ಣ ಊತ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ತೆರಳಿದ ಯುವಕನನ್ನು ಪರೀಕ್ಷಿಸಿದ ವೈದ್ಯರಿಗೆ ಅಚ್ಚರಿಯ ಸಂಗತಿ ಎದುರಾಗಿದೆ.
ಯುವಕನ ಕಣ್ಣುರೆಪ್ಪೆ ಮತ್ತು ಹುಬ್ಬಿನ ನಡುವಿನ ಭಾಗದಲ್ಲಿ ಮೊದಲು ಸಣ್ಣದಾಗಿ ಊತ ಕಾಣಿಸಿಕೊಂಡಿತ್ತು. ಬಳಿಕ ಆ ಜಾಗದಲ್ಲಿ ಬಿಳಿ ಬಣ್ಣದ ಎರಡು ಗಟ್ಟಿಯಾದ ತುದಿಗಳು ಚರ್ಮದ ಮೂಲಕ ಹೊರಬರಲು ಆರಂಭಿಸಿದ್ದವು.
ಇದರಿಂದ ಆತಂಕಗೊಂಡ ಯುವಕ ವೈದ್ಯರನ್ನು ಸಂಪರ್ಕಿಸಿದ್ದ. ಪರೀಕ್ಷೆ ನಡೆಸಿದ ವೈದ್ಯರು ಸಿಟಿ ಸ್ಕ್ಯಾನ್ (CT Scan) ಮಾಡಿಸಿದಾಗ, ಕಣ್ಣಿನ ಮೇಲ್ಭಾಗದ ಕಣ್ಣಿನ ಕುಳಿಯಲ್ಲಿ ಸಂಪೂರ್ಣವಾಗಿ ಬೆಳೆದ ಹಲ್ಲು ಇರುವುದು ಪತ್ತೆಯಾಗಿದೆ.
ವೈದ್ಯಕೀಯ ಭಾಷೆಯಲ್ಲಿ ಈ ಭಾಗವನ್ನು 'ಸುಪೀರಿಯರ್ ಆರ್ಬಿಟ್' ಎಂದು ಕರೆಯಲಾಗುತ್ತದೆ. ಈ ಭಾಗದಲ್ಲಿ ಹಲ್ಲು ಬೆಳೆದಿರುವುದು ಅತ್ಯಂತ ಅಪರೂಪದ ಬೆಳವಣಿಗೆಯಾಗಿದ್ದು, ಪ್ರಕರಣದ ವಿವರಗಳನ್ನು ಅಮೆರಿಕದ ನೇತ್ರವಿಜ್ಞಾನ ಅಕಾಡೆಮಿಗೆ ಸಂಬಂಧಿಸಿದ ವೈದ್ಯಕೀಯ ಪ್ರಕಟಣೆಯಲ್ಲಿ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಹಲ್ಲುಗಳು ಬೆಳೆಯಬೇಕಾದ ಬಾಯಿಯ ಬದಲಿಗೆ ದೇಹದ ಬೇರೆ ಭಾಗದಲ್ಲಿ ಹಲ್ಲು ಬೆಳೆಯುವುದನ್ನು ವೈದ್ಯಕೀಯ ಭಾಷೆಯಲ್ಲಿ 'ಎಕ್ಟೋಪಿಕ್ ಟೂತ್' (Ectopic Tooth) ಎಂದು ಕರೆಯಲಾಗುತ್ತದೆ. ಬಾಯಿಯ ಮೇಲ್ಛಾವಣಿ ಅಥವಾ ಮೂಗಿನ ಒಳಭಾಗದಲ್ಲಿ ಹಲ್ಲು ಬೆಳೆಯುವ ಪ್ರಕರಣಗಳು ಅಪರೂಪವಾಗಿ ವರದಿಯಾಗಿವೆ.
ಆದರೆ ಕಣ್ಣಿನ ಕುಳಿಯ ಮೇಲ್ಭಾಗದಲ್ಲಿ ಹಲ್ಲು ಪತ್ತೆಯಾಗಿರುವುದು ವೈದ್ಯಕೀಯ ಇತಿಹಾಸದಲ್ಲೇ ಮೊದಲ ಪ್ರಕರಣ ಎಂದು ಈ ಅಧ್ಯಯನದ ಸಹಲೇಖಕಿ ಡಾ. ಮೇಘನಾ ತನ್ವರ್ ತಿಳಿಸಿದ್ದಾರೆ.
ಈ ಯುವಕನಿಗೆ ಈ ಹಿಂದೆ ಮುಖಕ್ಕೆ ಗಾಯವಾಗಿರುವ ಯಾವುದೇ ಇತಿಹಾಸವಿರಲಿಲ್ಲ. ಅಲ್ಲದೆ, ಆನುವಂಶಿಕ ಕಾಯಿಲೆಗಳ ಲಕ್ಷಣಗಳೂ ಕಂಡುಬಂದಿರಲಿಲ್ಲ. ಸ್ಕ್ಯಾನ್‌ನಲ್ಲಿ ತಲೆಬುರುಡೆಯ ಇತರ ಭಾಗಗಳಲ್ಲಿ ಹೆಚ್ಚುವರಿ ಹಲ್ಲುಗಳು ಕಂಡುಬಂದಿಲ್ಲ. ಹೀಗಾಗಿ, ಈ ನಿರ್ದಿಷ್ಟ ಭಾಗದಲ್ಲಿ ಹಲ್ಲು ಬೆಳೆಯಲು ನಿಖರವಾದ ಕಾರಣವೇನು ಎಂಬುದು ವೈದ್ಯರಿಗೆ ಇನ್ನೂ ಸ್ಪಷ್ಟವಾಗಿಲ್ಲ.


