ದಾವಣಗೆರೆ: ಜಿಮ್ ಮುಗಿಸಿ ಮನೆಗೆ ಬಂದ ಕೆಲ ಹೊತ್ತಲ್ಲೇ ಕುಸಿದು ಬಾಡಿ ಬಿಲ್ಡರ್ ಓರ್ವರು ಮೃತಪಟ್ಟ ಘಟನೆ ಇಲ್ಲಿಯ ಕೆ.ಟಿ.ಜೆ. ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸುಶೀಲ್ ಕುಮಾರ್ (26) ಮೃತಪಟ್ಟ ಬಾಡಿ ಬಿಲ್ಡರ್. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ ಗಳಿಸಿದ್ದ ಅವರು ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಂಗ್ ವೇದಿಕೆಗಳಿಗೆ ತಾಲೀಮು ನಡೆಸುತ್ತಿದ್ದರು.
ಸುಶೀಲ್ ಕುಮಾರ್ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದು, ಹೃದಯಾಘಾತದ ಶಂಕೆ ವ್ಯಕ್ತವಾಗಿದೆ.
ಮನೆಗೆ ಬರುತ್ತಿದ್ದಂತೆ ಕುಸಿದು ಬಿದ್ದಿದ್ದ ಸುಶೀಲಕುಮಾರ್ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದು, ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ರಕ್ತದೊತ್ತಡ ಕಡಿಮೆಯಾಗಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ವೈದ್ಯರು ಹೇಳಿದ್ದಾರೆ.
ಯುವಕರು ಏನಾದರೂ ಸಾಧನೆ ಮಾಡಬೇಕು. ಜೀವನದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂದು ಹೇಳುತ್ತ ನಿತ್ಯ ಹತ್ತಾರು ಯುವಕರಿಗೆ ತರಬೇತಿ ನೀಡುತ್ತಿದ್ದ ಸುಶೀಲ್ ಅವರನ್ನು ಕಳೆದುಕೊಂಡು ಸ್ನೇಹಿತರು ಕಣ್ಣೀರಿಟ್ಟಿದ್ದಾರೆ.


