ಭೂಪಾಲ್ : ಮನುಷ್ಯನ ಅತ್ಯಂತ ನಂಬಕಸ್ತ ಗೆಳೆಯ ನಾಯಿ. ಮನೆಯ ಯಜಮಾನ ಮೃತಪಟ್ಟಾಗ ನಾಯಿಯ ಮೂಕರೋಧನೆಯ ಘಟನೆಗಳು ವರದಿಯಾಗಿದೆ.
ಇದೀಗ ಬೀದಿ ನಾಯಿಯೊಂದು ತನಗೆ ಪ್ರತಿ ದಿನ ಅನ್ನ, ಹಾಲು,ಬಿಸ್ಕೆಟ್ ನೀಡುತ್ತಿದ್ದ ವೃದ್ಧ ವ್ಯಕ್ತಿಯ ಅಂತ್ಯಕ್ರಿಯೆಯವರೆಗೂ ಹಿಂಬಾಲಿಸಿದ ಘಟನೆ ನಡೆದಿದೆ.
ಸ್ಮಶಾನದಲ್ಲಿ ಕುಟುಂಬಸ್ಥರು ಅಂತ್ಯಕ್ರಿಯೆ ವಿಧಿವಿಧಾನಗಳಲ್ಲಿ ತೊಡಗಿದರೆ, ಈ ಬೀದಿ ನಾಯಿ ದೂರದಲ್ಲಿ ಮೌನವಾಗಿ ಕುಳಿತು ರೋಧಿಸಿದ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ನಡೆದಿದೆ.
ಮೋಹನ್‌ಲಾಲ್ ರೈಕ್ವಾರ್ ಸೆಹೋರ್ ಜಿಲ್ಲೆಯ ನಿವಾಸಿ 75ರ ಹರೆಯದ ನಿವೃತ್ತ ಬ್ಯಾಂಕ್ ಉದ್ಯೋಗಿ.ಮೋಹನ್‌ಲಾಲ್ ತಮ್ಮ ಬಡಾವಣೆಯಲ್ಲಿದ್ದ ಬೀದಿ ನಾಯಿಗೆ ಪ್ರತಿ ದಿನ ಅನ್ನ ನೀಡುತ್ತಿದ್ದರು. ಬೆಳಗ್ಗೆ ವಾಕಿಂಗ್ ಹೋಗಿ ಬಂದ ಬಳಿಕ ಬೀದಿ ನಾಯಿಗೆ ಬಳಿ ತೆರಳಿ ಹಾಲು ಬಿಸ್ಕೆಟ್ ನೀಡುತ್ತಿದ್ದರು.
ಬಳಿಕ ತಿಂಡಿ, ಮಧ್ಯಾಹ್ನ ಊಟ, ಸಂಜೆ ವೇಳೆ ಬಿಸ್ಕೆಟ್, ರಾತ್ರಿ ಊಟ ನೀಡುತ್ತಿದ್ದರು. ಪ್ರತಿ ದಿನ ಇದು ಖಾಯಂ . ಹೀಗಾಗಿ ಬೀದಿ ನಾಯಿ ಹಾಗೂ ಮೋಹನ್‌ಲಾಲ್ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದರು. ವಾಕಿಂಗ್ ತೆರಳುವಾಗ ಬೀದಿ ನಾಯಿಯೂ ಮೋಹನ್‌ಲಾಲ್ ಹಿಂಬಾಲಿಸುತ್ತಿತ್ತು.


