ಬೀದರ್ : ಬೀದರ್ ಜಿಲ್ಲೆಯ (Bidar) ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿ ತೀವ್ರ ಆರ್ಥಿಕ ಸಂಕಷ್ಟದ ನಡುವೆಯೂ ವೃದ್ಧ ದಂಪತಿಯೊಬ್ಬರು (Couple )ತಾವೇ ಹೆಗಲು ಕೊಟ್ಟು ಬಿತ್ತನೆ ಕೂರಿಗೆಯನ್ನು ಎಳೆದ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ತಿಪ್ಪಣ್ಣ ಮತ್ತು ಗಂಗಮ್ಮ ದಂಪತಿ ಅಲ್ಪಸ್ವಲ್ಪ ಜಮೀನು ಹೊಂದಿದ್ದು, ಅದನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ಹೊಲದಲ್ಲಿ ಬಿತ್ತನೆ ಮಾಡಲು ಮುಂದಾಗಿದ್ದ ಈ ದಂಪತಿಗೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಎತ್ತುಗಳನ್ನು ಬಾಡಿಗೆಗೆ ತರಲು ಅಥವಾ ಟ್ರ್ಯಾಕ್ಟರ್ ಬಳಸಲು ಹಣವಿರಲಿಲ್ಲ. ಕೃಷಿ ಕಾರ್ಯ ಕೈಬಿಡಲಾಗದೆ, ಕೊನೆಗೆ ವೃದ್ಧ ದಂಪತಿ ತಾವೇ ಕೂರಿಗೆಗೆ ಹೆಗಲು ಕೊಟ್ಟು ಹೊಲದಲ್ಲಿ ಬಿತ್ತನೆ ಕಾರ್ಯ ನಡೆಸಿದ್ದಾರೆ.
ಮೊದಲು ಈ ಜಮೀನಿನಲ್ಲಿ ಉದ್ದು ಬಿತ್ತನೆ ಮಾಡಿದ್ದರೂ ಮಳೆ ಕೊರತೆಯಿಂದಾಗಿ ಬೆಳೆ ಕೈಕೊಟ್ಟಿತ್ತು.
ಇದರಿಂದ ದುಪ್ಪಟ್ಟು ನಷ್ಟದ ಬಿಸಿ ಎದುರಿಸುತ್ತಿರುವ ದಂಪತಿ, ಇದೀಗ ಅದೇ ಜಮೀನಿನಲ್ಲಿ ಮರುಬಿತ್ತನೆ ಮಾಡಲು ಮುಂದಾಗಿ ತೊಗರಿ ಬೀಜವನ್ನು ತಾವೇ ಕೂರಿಗೆ ಎಳೆಯುವ ಮೂಲಕ ಬಿತ್ತಿದ್ದಾರೆ.
ವೃದ್ಧಾಪ್ಯದಲ್ಲೂ ಬೆವರು ಹರಿಸಿ ಕಷ್ಟಪಡುತ್ತಿರುವ ತಮಗೆ ಸ್ವಂತ ಮನೆಯಾಗಲಿ, ಯಾವುದೇ ಸರ್ಕಾರಿ ಸೌಲಭ್ಯಗಳಾಗಲಿ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿರುವ ದಂಪತಿ, ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.


