ರಾಯಪುರ: ಛತ್ತೀಸ್ ಗಢದ ಬೆಮೆತಾರಾ ಜಿಲ್ಲೆಯಲ್ಲಿ ಘೋರ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬಳನ್ನು ಭೀಕರವಾಗಿ ಹತ್ಯೆಗೈದು, ಆಕೆಯ ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ರಾಕ್ಷಸನನ್ನು ಪೊಲೀಸರು ಬಂಧಿಸಿದ್ದಾರೆ.
ಸೋನ್ಪುರಿ ಗ್ರಾಮದ ನಿವಾಸಿ, 42 ವರ್ಷದ ರಾಮಪ್ರಸಾದ್ ಸೋನ್ವಾನಿ ಅಲಿಯಾಸ್ ಬಂದ ಗಾಳಿ ಬಂಧಿತ ಆರೋಪಿಯಾಗಿದ್ದಾನೆ.
ಜುಲೈ 6ರ ತಡರಾತ್ರಿ 50 ವರ್ಷದ ಮಹಿಳೆಯ ಮನೆಗೆ ನುಗ್ಗಿದ್ದ ಈತ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ.
ಈ ವೇಳೆ ಮಹಿಳೆ ತೀವ್ರ ಪ್ರತಿರೋಧ ಒಡ್ಡಿದ್ದರಿಂದ ಆಕ್ರೋಶಗೊಂಡ ಆರೋಪಿ, ಗುದ್ದಲಿಯಿಂದ ತಲೆಗೆ ಹೊಡೆದು ಆಕೆಯನ್ನು ಕೊಲೆ ಮಾಡಿದ್ದಾನೆ.
ಹತ್ಯೆಯ ಬಳಿಕ ಆರೋಪಿಯ ವಿಕೃತ ಮನಸ್ಸು ಜಾಗೃತಗೊಂಡಿದೆ. ಮೃತದೇಹದೊಂದಿಗೆ ಕಾಮ ತೀರಿಸಿಕೊಳ್ಳುವ 'ನೆಕ್ರೋಫಿಲಿಯಾ' ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಈತ, ಮಹಿಳೆಯ ನಿರ್ಜೀವ ದೇಹದ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ.
ಅಷ್ಟಕ್ಕೇ ನಿಲ್ಲದೆ, ಕೃತ್ಯದ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಗರಗಸ ತಂದು ಶವವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಆ ಭೀಕರ ಸ್ಥಿತಿಯಲ್ಲೂ ಶವದ ಭಾಗಗಳೊಂದಿಗೆ ಮತ್ತೆ ವಿಕೃತ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


