ಬೆಂಗಳೂರು: ಕರ್ನಾಟಕ ಆಡಳಿತ ಸೇವೆ (KAS) ಸೇರಿದಂತೆ ರಾಜ್ಯ ನಾಗರಿಕ ಸೇವೆಯ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಒಟ್ಟು 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಅಧಿಕೃತ ಅಧಿಸೂಚನೆ ಹೊರಡಿಸಿದೆ .
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಪೂರ್ವಭಾವಿ ಪರೀಕ್ಷೆಯನ್ನು 2026ರ ನವೆಂಬರ್ 15 ರಂದು ನಡೆಸಲು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ.
ಹುದ್ದೆಗಳ ವಿವರ ಹಾಗೂ ಸೇವಾ ವೃಂದಗಳು
ಅಧಿಸೂಚಿಸಲಾದ ಒಟ್ಟು 319 ಹುದ್ದೆಗಳಲ್ಲಿ ಗ್ರೂಪ್ 'ಎ' ವಿಭಾಗದ 117 ಹಾಗೂ ಗ್ರೂಪ್ 'ಬಿ' ವಿಭಾಗದ 202 ಹುದ್ದೆಗಳು ಸೇರಿವೆ. ಒಟ್ಟಾರೆ ಹುದ್ದೆಗಳ ಪೈಕಿ ಉಳಿಕೆ ಮೂಲ ವೃಂದಕ್ಕೆ (RPC) 297 ಮತ್ತು ಕಲ್ಯಾಣ ಕರ್ನಾಟಕ (HK) ವೃಂದಕ್ಕೆ 22 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
ಗ್ರೂಪ್ 'ಎ' ವಿಭಾಗದಲ್ಲಿ ಸಹಾಯಕ ಆಯುಕ್ತರು 39, ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು 50, ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಸಹಾಯಕ ಕಾರ್ಯದರ್ಶಿ 15, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಡ್-1 ರ 11 ಹಾಗೂ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರ 2 ಹುದ್ದೆಗಳಿವೆ.
ಗ್ರೂಪ್ 'ಬಿ' ವಿಭಾಗದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ 74, ತಹಶೀಲ್ದಾರ್ ಗ್ರೇಡ್-2 ರ 25, ಸಹಕಾರ ಸಂಘಗಳ ಸಹಾಯಕ ನಿಬಂಧಕರು 21, ನಗರಾಭಿವೃದ್ಧಿ ಇಲಾಖೆಯ ಮುಖ್ಯಾಧಿಕಾರಿ ಗ್ರೇಡ್-1 ರ 20, ಸಹಾಯಕ ಖಜಾನಾಧಿಕಾರಿ 12, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು 12, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಡ್-2 ರ 11, ಕಾರಾಗೃಹ ಇಲಾಖೆಯ ಸಹಾಯಕ ಅಧೀಕ್ಷಕರು 6, ಅಬಕಾರಿ ಉಪ ಅಧೀಕ್ಷಕರು 5, ಸರ್ಕಾರಿ ಸಚಿವಾಲಯದ ಶಾಖಾಧಿಕಾರಿ 5, ಕೆಪಿಎಸ್‌ಸಿ ಶಾಖಾಧಿಕಾರಿ 4, ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು 4 ಹಾಗೂ ಉದ್ಯೋಗಾಧಿಕಾರಿಯ 3 ಹುದ್ದೆಗಳು ಭರ್ತಿಯಾಗಲಿವೆ.
ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಕೆ
ಅರ್ಹ ಅಭ್ಯರ್ಥಿಗಳು 2026ರ ಆಗಸ್ಟ್ 1 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು 2026ರ ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ಪೂರ್ವಭಾವಿ ಪರೀಕ್ಷೆಯನ್ನು 2026ರ ನವೆಂಬರ್ 15 ರಂದು ನಡೆಸಲು ಆಯೋಗವು ತಾತ್ಕಾಲಿಕ ವೇಳಾಪಟ್ಟಿ ನಿಗದಿಪಡಿಸಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಸಡಿಲಿಕೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕಿದ್ದು, ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ 45 ವರ್ಷಗಳನ್ನು ನಿಗದಿಪಡಿಸಲಾಗಿದೆ.
ಸರ್ಕಾರದ ವಿಶೇಷ ಆದೇಶದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.
ಪರೀಕ್ಷಾ ಪ್ರಯತ್ನಗಳ ಮಿತಿ
ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 5 ಪ್ರಯತ್ನಗಳು ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 7 ಪ್ರಯತ್ನಗಳ ಮಿತಿ ಇರಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ಪ್ರಯತ್ನಗಳ ಮಿತಿ ಇರುವುದಿಲ್ಲ.
ಪರೀಕ್ಷಾ ವಿಧಾನ ಹಾಗೂ ಅರ್ಜಿ ಶುಲ್ಕ
ನೇಮಕಾತಿಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ವಸ್ತುನಿಷ್ಠ (MCQ) ಮಾದರಿಯ ತಲಾ 200 ಅಂಕಗಳ ಎರಡು ಪತ್ರಿಕೆಗಳನ್ನೊಳಗೊಂಡ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ 0.25 ಅಂಕಗಳ ಋಣಾತ್ಮಕ ಮೌಲ್ಯಮಾಪನವಿರುತ್ತದೆ.
ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 1250 ಅಂಕಗಳ ವಿವರಣಾತ್ಮಕ ಮಾದರಿಯ ಮುಖ್ಯ ಪರೀಕ್ಷೆ ಹಾಗೂ 25 ಅಂಕಗಳ ವ್ಯಕ್ತಿತ್ವ ಪರೀಕ್ಷೆ ಇರಲಿದೆ.
ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಅರ್ಹತಾ ಪತ್ರಿಕೆಗಳಲ್ಲಿ ಕನಿಷ್ಠ ಶೇ. 35 ಅಂಕಗಳಿಸುವುದು ಕಡ್ಡಾಯವಾಗಿದೆ. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ₹600, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹300 ಹಾಗೂ ಮಾಜಿ ಸೈನಿಕರಿಗೆ ₹50 ಅರ್ಜಿ ಶುಲ್ಕ ನಿಗದಿಯಾಗಿದ್ದು, SC/ST, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್ https://kpsconline.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


